ತಿ.ನರಸೀಪುರ : ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ನ.1 ರಂದು ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿಯಾಗಿ ಕರೆಯಲಾಗಿದ್ದ ಸಭೆಯಲ್ಲಿ ಸಾಂಪ್ರದಾ
ಯಿಕವಾಗಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಮಾತೃಭಾಷೆ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರುವ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದು. ನಾಡಿಗಾಗಿ ದುಡಿದ ಸಾಧಕರನ್ನು ಸನ್ಮಾನಿಸುವುದು ಹಾಗೂ ವಿಶೇಷವಾಗಿ ಕವಿಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ತಹಶೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ವಿಜೃಂಭಣೆಯ ಕನ್ನಡ ರಾಜ್ಯೋತ್ಸವದ ಆಚರಣೆಗೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ಸಭೆಯಲ್ಲಿ ಚರ್ಚೆ ನಡೆಸಿದಂತೆ ನಾಡಿನ ಹಿರಿಮೆಯ ಇತಿಹಾಸವನ್ನು ಪ್ರಸ್ತುತಪಡಿಸುವ ಭಾಷಣಕಾರರನ್ನು ಆಯ್ಕೆ ಮಾಡಿ, ಆಹ್ವಾನಿಸಲಾಗುವುದು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಸಾಧಕರನ್ನ ಗುರುತಿಸಿ ಸನ್ಮಾನಿಸಲಾಗುವುದು.
ಶಿಕ್ಷಣ ಇಲಾಖೆಯ ಜೊತೆ ಸಮಾಲೋಚನೆ ನಡೆಸಿ ಶ್ರೀ ಭುವನೇಶ್ವರಿ ಮೆರವಣಿಗೆಯ ಬಗ್ಗೆ ತೀರ್ಮಾನಿಸಿ, ಸಮಾರಂಭಕ್ಕೆ ಮುಖ್ಯ ಮಂತ್ರಿಗಳು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಮಾತನಾಡಿ, ರಾಜ್ಯದಾದ್ಯಂತ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಸರ್ಕಾರವೇ ನಿರ್ಧರಿಸುವುದರಿಂದ ತಾಲೂಕಿನಲ್ಲಿಯೂ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಯೋಜನೆಯಾಗಬೇಕು.
ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರನ್ನ ಕಾರ್ಯಕ್ರಮಕ್ಕೆ ತಾಲೂಕು ಅದೃತದಿಂದಲೇ ಖುದ್ದಾಗಿ ಆಹ್ವಾನಿಸಬೇಕು. ಸಾಂಪ್ರದಾಯಿಕ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಡಬೇಕು ಎಂದು ತಿಳಿಸಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷ ಎಂ. ಸಿ.ಮಂಜುಳ ಸೇರಿದಂತೆ ತಾ.ಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮುಖಂಡ ಎ ಶಿವಕುಮಾರ್ (ಬಡ್ಡು), ಸಿ.ಪುಟ್ಟಮಲ್ಲಯ್ಯ ಮಾತನಾಡಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ, ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಂ.ಅನಂತರಾಜು, ಪುರಸಭೆ ಮುಖ್ಯಾಧಿಕಾರಿಗಳಾದ ವಸಂತಕುಮಾರಿ, ಹೇಮಂತ್ ರಾಜು, ಎ ಇ ಇ
ವೀರೇಶ್, ಸಹಾಯಕ ಕೃಷಿ ನಿರ್ದೇಶಕ ಸುಹಾಸಿನಿ,ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಾಂತ, ಸಹಾಯಕ ಅರಣ್ಯಾಧಿಕಾರಿ, ಉಮೇಶ್, ಬಾಬೂಜಿ ಸಂಘದ ಅಧ್ಯಕ್ಷ ಸಿ.ಪುಟ್ಟಯ್ಯ, ಕೆಪಿಸಿಸಿ ಅಲ್ಪಸಂಖ್ಯಾತರ ಸಂಚಾಲಕ ಬಿ.ಮನ್ಸೂರ್ ಆಲಿ, ಕನ್ನಡ ಸಾಹಿತ್ಯ ಪರಿಷತ್ನ ಹೋಬಳಿ ಅಧ್ಯಕ್ಷ ಸಿದ್ದಪ್ಪ, ಯುವಕವಿ
ನಂದೀಶ್, ಮುಖಂಡರಾದ ಕೃಷ್ಣಮೂರ್ತಿ, ಮೇಗಡಹಳ್ಳಿ ಪ್ರಭಾಕರ್, ಡಿ.ಮಾದೇಶ್, ಕರುಣೇಶ್, ವಾಟಾಳು ಸಾಗರ್, ಚಿನ್ನಸ್ವಾಮಿ, ಬೈಕ್ ಜಾಫರ್, ಯೋಗಾನಂದ ಹಾಗೂ ಇತರರು ಇದ್ದರು.