ನೆಲಮಂಗಲ: ’ಕನ್ನಡ ಎಂದರೆ ಬಸವಣ್ಣ, ಬಸವಣ್ಣ ಎಂದರೆ ಕನ್ನಡ, ಸಾಹಿತ್ಯ ಎಂದರೆ ಬಸವಣ್ಣ, ಬಸವಣ್ಣ ಎಂದರೆ ಸಾಹಿತ್ಯ ಎನ್ನುವಷ್ಟರ ಮಟ್ಟಿಗೆ ವಚನಗಳ ಮೂಲಕ ಕನ್ನಡ ವಚನ ಸಾಹಿತ್ಯವನ್ನು ವಿಶ್ವವಿಖ್ಯಾತಗೊಳಿಸಿದ ಕೀರ್ತಿ ಜಗಜ್ಯೋತಿ ಬಸವೇಶ್ವರರಿಗೆ ಸಲ್ಲುತ್ತದೆ’ ಎಂದು ಕವಿ ಹಾಗೂ ಸಾಹಿತಿ ಆರಕ್ಷಕ ರತ್ನ ರಾಂ ಕೆ ಹನುಮಂತಯ್ಯ ನವರು ತಿಳಿಸಿದ್ದಾರೆ.
ಅವರು ಬಸವ ಸಾಹಿತ್ಯ ವೇದಿಕೆಯ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.’ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಒಂದೇ ಮಾತರಂ ಗೀತೆ ಇಡೀ ರಾಷ್ಟ್ರವನ್ನು ಒಗ್ಗೂಡಿಸಿತು. ಏಕೀಕರಣ ಸಂದರ್ಭದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆ ಇಡೀ ಕರ್ನಾಟಕವನ್ನು ಒಗ್ಗೂಡಿಸಿತು.
ಬಾರಿಸು ಕನ್ನಡ ಡಿಂಡಿಮವ ಗೀತೆ ಎಲ್ಲಾ ಕನ್ನಡಿಗರನ್ನು ಎಚ್ಚರಿಸಿತು. ಇದು ಕಾವ್ಯದ ಶಕ್ತಿ, ಇದು ಸಾಹಿತ್ಯದ ಶಕ್ತಿ. ಸಾವಿರ ವರ್ಷಗಳ ಹಿಂದೆ ಇದ್ದ ಪಂಪ ಇವತ್ತಿಗೂ ಜೀವಂತ, ಏಕೆಂದರೆ ಅವನ ಸಾಹಿತ್ಯದಿಂದ. ಜಗತ್ತಿನ ಎಲ್ಲ ಕ್ರಾಂತಿಗಳ ಹಿಂದೆ ಸಾಹಿತ್ಯ ಇದೆ. ಹಾಗಾಗಿ ಸಾಹಿತ್ಯ ಮತ್ತು ಸಾಹಿತಿಗಳನ್ನು ಬೆಳೆಸುವ ಕೆಲಸವಾಗಬೇಕು’ ಎಂದು ಲೇಖಕ ಚಿಂತಕ ಅಂಕಣಕಾರ ಮಣ್ಣೆ ಮೋಹನ್ ತಿಳಿಸಿದರು. ಅವರು ಕೂಡ ಕಾರ್ಯಕ್ರಮ ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
’ಬಸವ ಸಾಹಿತ್ಯ ವೇದಿಕೆ ವತಿಯಿಂದ ಉದಯೋನ್ಮುಖ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಸಾಗುತ್ತದೆ’ ಎಂದು ವೇದಿಕೆಯ ಅಧ್ಯಕ್ಷ ಶಿವಪ್ರಸಾದ್ ಆರಾಧ್ಯರವರು ತಿಳಿಸಿದರು. ’ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯದ ಬೆಳವಣಿಗೆಗೆ ಶಕ್ತಿ ಮೀರಿ ಶ್ರಮಿಸುತ್ತದೆ’ ಎಂದು ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ್ ಮೂರ್ತಿ ತಿಳಿಸಿದರು.’೧೨ನೇ ಶತಮಾನದಲ್ಲಿ ಬಸವಣ್ಣನವರು ರೂಪಿಸಿದ ಅನುಭವ ಮಂಟಪವನ್ನು ಡಾ ಅಂಬೇಡ್ಕರ್ ಅವರು ಸಂವಿಧಾನ ರೂಪದಲ್ಲಿ ಸಂಸತ್ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ’ ಎಂದು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕ ಎಂ ಜಿ ಗೋಪಾಲ್ ತಿಳಿಸಿದರು.
ಕನ್ನಡ ಸಾಂಸ್ಕೃತಿಕ ರಂಗ ಮತ್ತು ಕರ್ನಾಟಕ ಪತ್ರಕರ್ತರ ಧ್ವನಿ ಸಂಘಟನೆಗಳ ಮೂಲಕ ಕವಿಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿ ಸಿದ್ದರಾಜುರವರು ತಿಳಿಸಿದರು.’ತಾಲೂಕಿನಲ್ಲಿ ಉತ್ಕೃಷ್ಟ ಸಾಹಿತ್ಯ ಹೊರಬರಲಿ’ ಎಂದು ಹಿರಿಯ ಸಾಯಿತಿ ಬಿದಲೂರು ಸೋಮಣ್ಣ ತಿಳಿಸಿದರು. ’ಪ್ರತಿ ತಿಂಗಳು ನಿಗದಿತ ದಿನಾಂಕದಂದು ಕವಿಗೋಷ್ಠಿ ನಡೆಸುವ ವ್ಯವಸ್ಥೆಯಾಗಲಿ’ ಎಂದು ಪತ್ರಕರ್ತರಾದ ರಾಜಶೇಖರ್ ಸೂಚಿಸಿದರು. ’ಸಾಹಿತ್ಯ ಪರಿಸರವನ್ನು ಸೃಷ್ಟಿಸುತ್ತಿರುವ ಬಸವ ಸಾಹಿತ್ಯ ವೇದಿಕೆಗೆ ಅಭಿನಂದನೆಗಳು’ ಎಂದು ಎಂ ವಿ ನೆಗಳೂರು ತಿಳಿಸಿದರು.
’ತಾಲೂಕಿನಲ್ಲಿ ಸಾಹಿತ್ಯವನ್ನು ಕಟ್ಟುವಲ್ಲಿ ಅನೇಕರ ಕೊಡುಗೆ ಅಪಾರ’ ಎಂದು ಡಾ ಬೋಗಣ್ಣ ನೆನಪಿಸಿದರು.’ವಿನಯ ಮತ್ತು ಸಹನೆ ಕವಿಗಳ ಧ್ಯೇಯವಾಗಬೇಕು. ಹಾಗಾದಾಗ ತೆಗಳಿಕಗೆ ಜಗ್ಗದೆ, ಹೊಗಳಿಕೆಗೆ ಹಿಗ್ಗದೆ ಸಮಾನ ಚಿತ್ತ ನಮ್ಮದಾಗುತ್ತದೆ’ ಎಂದು ಕವಿ ಕೆ ಮಹಾಲಿಂಗಯ್ಯ ತಿಳಿಸಿದರು. ’ಎಲ್ಲಾ ತಳ ಸಮುದಾಯಗಳ ಜನರಿಂದ ಬಸವಣ್ಣನವರು ವಚನಗಳನ್ನು ಬರೆಸಿದರು’ ಎಂದು ಕೆ ಬಿ ಶಿವಶಂಕರಯ್ಯ ತಿಳಿಸಿದರು.
ಡಾ ಎನ್ ಮುರಳಿಧರ್ ವಿರಚಿತ ’ಗಗನ ಕುಸುಮ’ ಮತ್ತು ’ಇಂಚರ’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಕಾರ್ಗಿಲ್ ವೀರಯೋಧರಾದ ಸುರೇಶ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಿಚಾರಗೋಷ್ಠಿಯಲ್ಲಿ ರಾಂ ಕೆ ಹನುಮಂತಯ್ಯ, ಮಣ್ಣೆ ಮೋಹನ್, ಕೆ ಮಹಾಲಿಂಗಯ್ಯ, ರೇಣುಕಾ ಪ್ರಸಾದ್ ಮತ್ತು ಆಕಾಶ್ ಮಂಡ್ಯ ರವರು ಭಾಗವಹಿಸಿದ್ದರು. ಸಾಹಿತ್ಯದಿಂದ ಏನು ಉಪಯೋಗವಿಲ್ಲ, ಬದಲಿಗೆ ವಿಜ್ಞಾನವೇ ಎಲ್ಲಾ ಎಂಬ ಆಕಾಶ್ ಮಂಡ್ಯ ರವರ ವಿಚಾರಕ್ಕೆ ಉಪನ್ಯಾಸಕ ಗಂಗರಾಜುರವರು ಆಕ್ಷೇಪ ವ್ಯಕ್ತಪಡಿಸಿ ಸಮಜಾಯಿಸಿ ನೀಡಿದರು. ವೀರಸಾಗರ ಬಾನು ಪ್ರಕಾಶ್, ಡಾ ಯಶೋಧ, ದೊಡ್ಡೇರಿ ಬೈಲಪ್ಪ, ಮುಂತಾದವರು ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಎನ್ ಆರ್ ನಾಗರಾಜ್, ಆನಂದ್ ಮೌರ್ಯ, ಸಿರಾಜ್ ಅಹ್ಮದ್, ಬ್ಯಾಡನೂರು ವೀರಭದ್ರಪ್ಪ, ಚನ್ನಕೇಶವ ಲಾಳನಕಟ್ಟೆ, ಪುಟ್ಟರಾಜು ಹೊಸಳ್ಳಯ್ಯ, ನೂರುದ್ದೀನ್, ಅಂಜನ್ ದೊಡ್ಡಬಳ್ಳಾಪುರ, ವೀಣಾ ಟಿ ಬೇಗೂರು, ಮಾಲೂರು ನಾರಾಯಣ ಸ್ವಾಮಿ, ಮಾಲೂರು ನಂಜಪ್ಪ, ಮಲ್ಲೇಶ್ ಹಾಸನ, ಪಾವಗಡ ಸಣ್ಣರಂಗಮ್ಮ,ಕುಣಿಗಲ್ ಡಾ. ಲಕ್ಷ್ಮೀ ನರಸಮ್ಮ, ನಾಗರಾಜು ಮಧುಗಿರಿ, ಸುಮಲತ ಮೈಸೂರು, ಮಾರುತಿ ವಡ್ಡಗೆರೆ, ಪದ್ಮನಾಭ ಬೆಂಗಳೂರು, ಚನ್ನಪ್ಪ ಕನಸವಾಡಿ, ರಾಜೇಂದ್ರ ಪ್ರಸಾದ್ ದಾವಣಗೆರೆ, ದೇವನಹಳ್ಳಿ ದೇವರಾಜ್, ದೀಪಿಕಾ ದೇವರಾಜ್, ಮಂಜು ಗರಣಿ, ನೂರುದ್ದೀನ್, ಹೇಮಾವತಿ ಹಂಚೀಪುರ ಮುಂತಾದವರು ಕವನ ವಾಚನ ಮಾಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಡಾ ವೆಂಕಟೇಶ್ ಆರ್ ಚೌಥಾಯಿ ಯವರ ಅದ್ಭುತವಾದ ಕಾರ್ಯಕ್ರಮ ನಿರೂಪಣೆ ವಿಶೇಷ ಮೆರುಗು ನೀಡಿತು. ಡಾ ಸದಾನಂದ ಆರಾಧ್ಯರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀಣಾ ಬೇಗೂರು ಹಾಗೂ ಕುಮಾರಿ ಅಭಿಶ್ರೀ ರವರಿಂದ ಪ್ರಾರ್ಥನೆ ನೆರವೇರಿತು. ದಾ ನ ನರಸಿಂಹಮೂರ್ತಿರವರು ವಚನ ಗಾಯನ ಮಾಡಿದರು. ಬಲವಂತ ಮೋರಟಗಿಯವರು ಸ್ವಾಗತ ಕೋರಿದರು. ಕುಮಾರಿ ಜೀವಿತಾ ರವರ ಭರತನಾಟ್ಯ ಮತ್ತು ಕುಮಾರಿ ವರ್ಷ ಮಹದೇವಯ್ಯ ರವರ ಏಕಪಾತ್ರಾಭಿನಯ ಎಲ್ಲರ ಗಮನ ಸೆಳೆಯಿತು. ರೇಣುಕಾ ಪ್ರಸಾದ್ ರವರು ವಂದನಾರ್ಪಣೆ ನೆರವೇರಿಸಿದರು.