ಶಿಡ್ಲಘಟ್ಟ: ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯ ಹಿರಿಮೆಯನ್ನು ಬೆಳೆಸುವ ಮತ್ತು ಉಳಿಸುವ ಕಾಯಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅನನ್ಯವಾದುದು. ತಾಲೂಕು ಮಟ್ಟದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಗಳು ಇದಕ್ಕೆ ಪೂರಕವಾಗಿದ್ದು ಹತ್ತನೇ ಸಾಹಿತ್ಯ ಸಮ್ಮೇಳನ ಇಂದು ನಗರದಲ್ಲಿ ಸಂಘಟಕರ ತಿಳಿಗೇಡಿತನದ ನಡುವೆ ನಡೆಯಲಿದೆ.
ಕನ್ನಡ ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಪಟೇಲ್ ನಾರಾಯಣಸ್ವಾಮಿ ಈಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು. ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕರಾಗಿ ವೃತ್ತಿ ನಿರ್ವಹಣೆ ಮಾಡಿ ನಿವೃತ್ತಿನಂತರವೂ ಸಾಹಿತ್ಯ ಉಳಿಸಿ ಬೆಳೆಸುವ ಕಾಯಕ ಮುಂದುವರಿಸಿದ್ದಾರೆ. ಇವರ ಆಸಕ್ತಿ ಗಮನಿಸಿ ಇವರೆಡೆಗೆ ತಾಲೂಕುಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ಅರಸಿ ಬಂತು ಎನ್ನಲಾಗಿದೆ.
ಅಲ್ಪಸಮಯದಲ್ಲಿ ಅತಿ ದೊಡ್ಡ ಜವಾಬ್ದಾರಿಯನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ಇವರ ಮೇಲೆ ಅನಿವಾರ್ಯವಾಗಿ ಬಿದ್ದಿತ್ತು. ಸಾವಿರಾರು ಮಂದಿ ಸದಸ್ಯರಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಬ್ಬರಿಗೂ ಆಹ್ವಾನ ನೀಡುವ ಸವಾಲು ಇವರನ್ನು ಧೃತಿಗೆಡಿಸಿದ್ದು ಸಹಜ. ಆದರೆ ಕೆಲವು ಮಿತ್ರರ ಸಹಕಾರದ ನಂಬಿಕೆಯ ಮೇಲೆ ಇವರು ಸಾಹಿತ್ಯ ಸಮ್ಮೇಳನ ನಡೆಸುವ ಜವಾಬ್ದಾರಿ ವಹಿಸಿಕೊಂಡು ರಾತ್ರಿ- ಹಗಲು ವಿಶ್ರಾಂತಿ ಇಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದಾರೆ. ಸ್ಥಳೀಯ ಶಾಸಕರ ಸಹಕಾರ ಇದ್ದುದ್ದರಿಂದ ನಿರಾಳವಾಗಿ ಇರುವಂತಾಗಿದೆ.
ಇದರ ನಡುವೆ ಸಮ್ಮೇಳನ ಅಧ್ಯಕ್ಷರ ಆಯ್ಕೆಯ ಬಗ್ಗೆ ಕೆಲವರ ಹಿತಾಸಕ್ತಿ ಇದೆ ಎಂಬುದು ನಿಜವಾದರೂ ಪ್ರಚಾರಪ್ರಿಯತೆಗಾಗಿ ನಿವೃತ್ತ ಹಿರಿಯ ಪತ್ರಕರ್ತ ತಮ್ಮ ಸಮುದಾಯದ ವಿದ್ಯಾ ಸಂಸ್ಥೆಯ ಹೊಣೆಗಾರಿಕೆಯ ಜೊತೆಗೆ ತನ್ನ ಜೀವಮಾನದ ಆಸೆ ಈಡೇರಿಸಿಕೊಂಡಂತಾಗಿದೆ. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಇವರಿಗೆ ಅಂತಹ ಗುರುದಕ್ಷಿಣೆ ನೀಡಿದ್ದಾರೆ ಎಂದು ಗುಸು-ಗುಸು ಕೇಳಿ ಬಂದಿದೆ.
ಇದರ ನಡುವೆ ಪತ್ರಕರ್ತರ ಸಂಘದ ಹೆಸರಿನ “ಧ್ವನಿ”ಗೆ ಕಿವಿಗೊಡದ ಹಿರಿಯ ಹಾಗೂ ಮೂಲ ಪತ್ರಕರ್ತರ ಸಂಘದ ಸ್ವಾಭಿಮಾನಿ ಹಿರಿಯ ಪತ್ರಕರ್ತರ ಹೆಸರನ್ನು ಬಳಸಿಕೊಂಡಿರುವುದು ಗಲಿಬಿಲಿ ಉಂಟು ಮಾಡಿದೆ.ಏನೇ ಆದರೂ ಪಟೇಲ್ ನಾರಾಯಣಸ್ವಾಮಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹೊಸ ಹೊಸ ಅನುಭವಗಳನ್ನು ಈ ಸಮ್ಮೇಳನದ ಮೂಲಕ ಪಡೆಯುವಂತಾಗಿದೆ.