ದೊಡ್ಡಬಳ್ಳಾಪುರ: ಜಗತ್ತಿನ ಬದಲಾವಣೆಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸಿದೆ. ಶಿಕ್ಷಣವು ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಜೀವನದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರೊ .ಬಿ.ಎನ್.ಕೃಷ್ಣಪ್ಪ ತಿಳಿಸಿದರು.
ಅವರು ದೊಡ್ಡಬಳ್ಳಾಪುರ ನಗರದ ವಿದ್ಯಾನಿಧಿ ಪದವಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪದವಿಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ
ಮಾತನಾಡಿದರು.
ಪದವಿ ಪಡೆದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ವಿಪುಲವಾದ ಅವಕಾಶಗಳಿವೆ. ಬೆಂಗಳೂರುಗ್ರಾಮಾಂತರ ಜಿಲ್ಲೆಯಲ್ಲಿ ಬಹು
ರಾಷ್ಟ್ರೀಯ ಕಂಪನಿಗಳು ಪ್ರಾರಂಭವಾಗುತ್ತಿವೆ. ಇವುಗಳ ಸದುಪಯೋಗವನ್ನು ಯುವಕರು ಪಡೆದುಕೊಳ್ಳಬೇಕು. ವೃತ್ತಿ ಜೀವನದಲ್ಲಿ ಸಹ ಉತ್ಸಾಹ ಲವಲವಿಕೆ ಹೊಂದಿರಬೇಕು ಎಂದರು.
ವಿದ್ಯಾರ್ಥಿಗಳು ನಮ್ಮ ನಾಡುನುಡಿಯ ಹಿರಿಮೆಯನ್ನು ಅರಿಯ ಬೇಕು. ಕನ್ನಡ ನಾಡು ನುಡಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕನ್ನಡ ಪ್ರಜ್ಞೆ ಮತ್ತು ಕರ್ನಾಟಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳ ಬೇಕು. ಕನ್ನಡ ದಿನಪತ್ರಿಕೆಗಳನ್ನು ಮತ್ತು ಕನ್ನಡ ಪುಸ್ತಕಗಳನ್ನು ಓದುವಹವ್ಯಾಸ ನಿರಂತರವಾಗಿ ಇರಬೇಕು.
ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತುಪರಂಪರೆಯನ್ನು ನಾವು ಅರಿಯುವುದರೊಂದಿಗೆ ನಮ್ಮ ಜೊತೆಯವರಿಗೂ ಅರಿವು ಮೂಡಿಸಬೇಕು. ಕನ್ನಡಿಗರು ಎಷ್ಡೇ ಭಾಷೆ ಕಲಿತರೂ ಕನ್ನಡ ಭಾಷೆಯನ್ನು ಮರೆಯಬಾರದು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮಾನವೀಯ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ನಾವು ಕಲಿತ ವಿದ್ಯೆಗೆ ಮತ್ತು ಹುದ್ದೆಗೆ ಗೌರವ ಬರುತ್ತದೆ. ಸ್ಪರ್ಧಾತ್ಮಕ ಕಾಲದಲ್ಲಿ ಪ್ರತಿಭೆಗೆ ಮನ್ಬಣೆ ದೊರೆಯುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ವಿದ್ಯೆ ಮತ್ತು ಕೌಶಲ್ಯವನ್ನು ಪಡೆಯಬೇಕು.
ಬಸವಣ್ಣ ಮತ್ತು ಶರಣರು ಕಾಯಕ ಪ್ರಜ್ಞೆಯಮಹತ್ವವನ್ನು ಸಾರಿದರು. ಬಸವಣ್ಣ ನವರ ಆರ್ಥಿಕ ಮತ್ತು ಸಾಮಾಜಿಕ ಚಿಂತನೆ ಸಮಾಜ ಬದಲಾವಣೆಗೆ ಸಹಕಾರಿ ಆಯಿತು ಎಂದರು.ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ .ದಿನೇಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ರಂಗನಾಥ, ಉಪನ್ಯಾಸಕರುಗಳಾದ ಜಯರಾಮ್, ಚೇತನ್, ತೇಜಸ್ವಿನಿ, ಶಿವಾನಂದ್, ಶ್ರೀಧರ್, ಶಮಬೇಗಂ ಮುಂತಾದವರು ಭಾಗವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.



