ಕೆ.ಆರ್.ಪೇಟೆ: ಕಬ್ಬು ಕಟಾವು ಮಾಡುವ ವೇಳೆ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಘಟನೆ ಬಂಡಿಹೊಳೆ ಗ್ರಾಮದಲ್ಲಿ ನಡೆದಿದೆ.ತಾಲ್ಲೂಕಿನ ಕಸಬಾ ಹೋಬಳಿಯ ಬಂಡಿಹೊಳೆ ಗ್ರಾಮದಲ್ಲಿ ಈ ಘಟನೆ ಜರುಗಿದ್ದು ಗ್ರಾಮದ ಅನುರಾಧಮ್ಮ ಎಂಬುವವರ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಎರಡು ಚಿರತೆ ಮರಿಗಳನ್ನು ಕಂಡು ಕಬ್ಬು ಕಟಾವು ಮಾಡುವ ಕೂಲಿ ಕಾರ್ಮಿಕರು ಭಯಗೊಂಡಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಐಸಿಎಲ್ ಕಾರ್ಖಾನೆಯ ಕ್ಷೇತ್ರ ಸಹಾಯಕ ಎಸ್.ಆರ್.ಕುಮಾರ್ ಚಿರತೆ ಮರಿಗಳನ್ನು ಜಮೀನಿನ ಪಕ್ಕದಲ್ಲಿ ಸುರಕ್ಷಿತವಾಗಿ ಇರಿಸಿ ನಂತರ ಕಬ್ಬು ಕಟಾವು ಮಾಡಿಸಿದ್ದಾರೆ. ಆತಂಕ:-ಮರಿಗಳನ್ನು ಬಿಟ್ಟು ಹೋಗಿರುವ ತಾಯಿ ಚಿರತೆ ಮತ್ತೆ ಮರಿಗಳನ್ನು ಹುಡುಕಿಕೊಂಡು ಬರಬಹುದು ಎಂದು ಅಕ್ಕಪಕ್ಕದ ಜಮೀನಿನ ರೈತರು ತಮ್ಮ ಜಮೀನುಗಳಿಗೆ ತೆರಳಲು ಭಯ ಭೀತರಾಗಿದ್ದಾರೆ ಸಂಬಂಧಪಟ್ಟ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ ಶೀಘ್ರವಾಗಿ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.