ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದು ಆರಂಭಗೊಳ್ಳುವ ಮುನ್ನವೇ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಶಾಸಕರ ಭವನದಿಂದ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ಶಾಸಕರ ಭವನ ಬಳಿಯಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿ ಬಳಿಯಿಂದ ಮೆರವಣಿಗೆ ಆರಂಭಗೊಂಡಿತು.
ಬೆಳಬೆಳ್ಳಗೆಯೇ ತುಂತುರು ಮಳೆ ಹನಿಯುತ್ತಿದ್ದರು ಲೆಕ್ಕಿಸದೆ ಬಿಜೆಪಿ ಶಾಸಕರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಕೊಡೆ ಹಿಡಿದು ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡರು.ಮಳೆಯನ್ನೂ ಲೆಕ್ಕಿಸದೆ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರಲ್ಲದೆ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದುಒತ್ತಾಯಿಸುವ ಭಿತ್ತಿಪತ್ರಗಳನ್ನು ಹಿಡಿದಿದ್ದರು.
ಪ್ರತಿಭಟನಾಕಾರರು ವಿಧಾನಸೌಧ ಆವರಣ ಪ್ರವೇಶಿಸಿದಾಗ ಇತ್ತ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಪ್ರತಿಭಟನಾ ಕಾರಾರರು ಎದುರಾದರು.ಪಕ್ಷದ ರಾಜ್ಯಾಧ್ಯಕ್ಷ ಬಿ..ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸುತ್ತೇವೆ. ಮುಖ್ಯಮಂತ್ರಿ ಹಾಗೂ ಹಗರಣದಲ್ಲಿ ಪಾಲ್ಗೊಂಡಿರುವ ವಾಲ್ಮೀಕಿ ಅಭಿವೃದ್ಧಿನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಪಡಿಸಿದರು.
ರಾಜ್ಯದ ಇತಿಹಾಸದಲ್ಲಿ ದಲಿತರಿಗೆ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿ ಹಣ ಲೂಟಿ ಹೊಡೆಯಲಾಗಿದೆ ಎಂದು ಟೀಕಿಸಿದರು. ದಲಿತರ ಪರ ಇದ್ದೇವೆ ಅಂತಾ ಹೇಳಿ ಅವರ ಹಣ ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ನಾವು ಪ್ರತಿಭಟನೆ ಮಾಡ್ತಿದ್ದೇವೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೋಡಬೇಕು. ಸದನದ ಒಳಗೂ ಹೋರಾಟ ಮಾಡುತ್ತೇವೆ ಎಂದು ಅಶೋಕ್ ಹೇಳಿದರು.