ಅಬ್ಬಾ ಕರ್ನಾಟಕದ ಈ ಪ್ರತಿಭಾವಂತ ಆಟಗಾರನ ಛಲಕ್ಕೆ ಮೆಚ್ಚಲೇ ಬೇಕು. ಕಳೆದ ಪಂದ್ಯದಲ್ಲಷ್ಟೇ ಪ್ರಥಮ ದರ್ಜೆ ಪಂದ್ಯದಲ್ಲಿ ಔಟಾಗದೇ ಅಧ್ಯಧಿಕ ರನ್ ಕಲೆ ಹಾಕಿ ಹೊಸ ದಾಖಲೆ ಸೃಷ್ಟಿಸಿದ್ದ ಕರುಣ್ ನಾಯರ್ ಇದೀಗ ನಿರಂತರ ನಾಲ್ಕನೇ ಶತಕ ಗಳಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಈ ಮೂಲಕ ಮತ್ತೆ ಬಲವಾಗಿ ಟೀಂ ಇಂಡಿಯಾ ಕದ ತಟ್ಟಿದ್ದಾರೆ. ಅವರು ಬಾರಿಸಿದ ಚೆಂಡು ಇದೀಗ ಬಿಸಿಸಿಐ ಆಯ್ಕೆ ಸಮಿತಿ ಅಂಗಳದಲ್ಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಕಣ್ತೆರೆದು ನೋಡಬೇಕು ಅಷ್ಟೇ.
ವಿದರ್ಭ ತಂಡದ ನಾಯಕರಾಗಿರುವ ಅವರು, ಭಾನುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ರಾಜಸ್ಥಾನ ತಂಡದ ವಿರುದ್ಧ 122 ರನ್ ಗಳಿಸಿ ತಂಡವನ್ನು ಸೆಮಿಫೈನಲ್ ಗೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಭಾನುವಾರ ನಡೆದ ಎರಡನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 9 ವಿಕೆಟ್ಗಳಿಂದ ರಾಜಸ್ಥಾನ ತಂಡವನ್ನು ಸೋಲಿಸಿದ ವಿದರ್ಭ ತಂಡ ಜನವರಿ 16ರಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದ ಸವಾಲು ಎದುರಿಸಲಿದೆ. ಜ.18ರಂದು ಫೈನಲ್ ಪಂದ್ಯ ನಡೆಯಲಿದೆ.
ವಿದರ್ಭಗೆ ಸುಲಭ ಜಯ: ರಾಜಸ್ಥಾನ ಒಡ್ಡಿದ 292 ರನ್ಗಳ ಗುರಿ ಬೆನ್ನಟ್ಟಿದ ಕರುಣ್ ನಾಯರ್ ಸಾರಥ್ಯದ ವಿದರ್ಭ, 43.1 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ಧ್ರುವ್ ಶೊರೆಯ್ ( ಅಜೇಯ 118) ಮತ್ತು ಕರುಣ್ ನಾಯರ್( ಅಜೇಯ 122) ಶತಕ ಗಳಿಸಿ ವಿದರ್ಭಕ್ಕೆ ಸುಲಭ ಜಯ ತಂದುಕೊಟ್ಟರು.ಧ್ರುವ್ ಶೊರೆಯೊ ಅವರೊಂದಿಗೆ ಅಜೇಯ 200 ರನ್ ಗಳ ಮಹತ್ವದ ಜೊತೆಯಾಟವಾಡಿದರು. ಭಾನುವಾರ ನಡೆದ ಪಂದ್ಯದಲ್ಲಿ ಅವರು ಕೇವಲ 88 ಎಸೆತಗಳಲ್ಲಿ 122 ರನ್ ಬಾಚಿದರು. ಅವರ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ ಗಳಿದ್ದವು. ಧ್ರುವ್ ಅವರು 131 ಎಸೆತಗಳನ್ನು ಎದುರಿಸಿ 118 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ 10 ಬೌಂಡರಿ, 3 ಸಿಕ್ಸರ್ ಗಳಿದ್ದವು. ಈ ಟೂರ್ನಿಯಲ್ಲಿ ಅವರದ್ದು ನಿರಂತರ 4ನೇ ಶತಕವಾಗಿದೆ. ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿರುವ ಕರುಣ್, ಸದ್ಯ ಐದು ಶತಕ ಗಳಿಸಿದ್ದು, ಒಟ್ಟು 637 ರನ್ ಕಲೆಹಾಕಿದ್ದಾರೆ.