ಚೆನ್ನೈ: ಆಘಾತಕಾರಿ ಘಟನೆಯೊಂದರಲ್ಲಿ ಗಿಂಡಿಯಲ್ಲಿರುವ ಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಂಕೊಲಾಜಿ ವಿಭಾಗದ ವೈದ್ಯರೊಬ್ಬರಿಗೆ ವ್ಯಕ್ತಿಯೊಬ್ಬ ಬುಧವಾರ ಬೆಳಗ್ಗೆ ಚಾಕುವಿನಿಂದ ಇರಿದಿದ್ದಾನೆ. ಆರೋಪಿಯನ್ನು ಪೆರುಗುಳತ್ತೂರಿನ ವಿಘ್ನೇಶ್ ಎಂದು ಗುರುತಿಸಲಾಗಿದೆ.
ಬೆಳಗ್ಗೆ 10:30ರ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದ ಈತ ಹೊರರೋಗಿ ಕೊಠಡಿಯಲ್ಲಿ ಆಂಕೊಲಾಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬಾಲಾಜಿ ಅವರಿಗೆ ಏಳು ಬಾರಿ ಇರಿದು, ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆದಾಗ್ಯೂ, ಸಾರ್ವಜನಿಕರು ಮತ್ತು ಇತರ ಆಸ್ಪತ್ರೆಯ ನೌಕರರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ.
ವಿಘ್ನೇಶ್ ಅವರ ತಾಯಿ ಕಳೆದ ಕೆಲವು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದರು ಮತ್ತು ಆರು ಬಾರಿ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದರು. ಶ್ವಾಸಕೋಶದ ಸಮಸ್ಯೆ ಎದುರಿಸುತ್ತಿದ್ದರಿಂದ ಅವರನ್ನು ಮನೆಗೆ ಕರೆದೊಯ್ದಿದ್ದರು. ಕೆಲ ದಿನಗಳ ಹಿಂದೆ ಆಕೆಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಂತರ ಆತ ಇಂದು ಗಿಂಡಿಯಲ್ಲಿರುವ ಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದಾಗ ಡಾ.ಬಾಲಾಜಿ ಅವರ ಕೊಠಡಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಲ್.ಪಾರ್ಥಸಾರಥಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಾಳಿಯ ನಂತರ ತಕ್ಷಣವೇ ಬಾಲಾಜಿ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅವರು ಹೃದ್ರೋಗಿಯಾಗಿದ್ದಾರೆ ಎಂದು ಪಾರ್ಥಸಾರಥಿ ತಿಳಿಸಿದ್ದಾರೆ. ಘಟನೆಯ ಕುರಿತು ವಿವರವಾದ ವರದಿಯನ್ನು ಕೇಳಲಾಗಿದೆ. ಡಾ.ಬಾಲಾಜಿ ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಆರೈಕೆ ಖಾತ್ರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆ ಪಡೆಯಲು ಬರುವವರಿಗೆ ಸರ್ಕಾರಿ ವೈದ್ಯರು ನಿಸ್ವಾರ್ಥ ಮತ್ತು ಹಗಲು-ರಾತ್ರಿ ಎನ್ನದೇ ಸೇವೆ ಮಾಡುತ್ತಾರೆ. ಅವರ ಸುರಕ್ಷತೆ ಖಾತ್ರಿಪಡಿಸುವುದು ಕರ್ತವ್ಯವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.