ಬೆಂಗಳೂರು: ಕ್ವಾರ್ಟರ್ಫೈನಲ್ಸ್ ಪ್ರವೇಶಕ್ಕಾಗಿ ತ್ರಿಕೋನ ಹೋರಾಟದಲ್ಲಿ ಸಿಲುಕಿರುವ ಕರ್ನಾಟಕ ತಂಡ, ಗುರುವಾರ ಇಲ್ಲಿಆರಂಭವಾಗಲಿರುವ ರಣಜಿ ಟ್ರೋಫಿ ಎಲೈಟ್ ‘ಸಿ’ ಗುಂಪಿನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಹರಿಯಾಣ ವಿರುದ್ಧ ಬೋನಸ್ ಅಂಕದೊಂದಿಗೆ ಗೆಲ್ಲಬೇಕಾದ ಒತ್ತಡಕ್ಕೆ ಎದುರಿಸುತ್ತಿದೆ.
ಪ್ರಸ್ತುತ 19 ಅಂಕಗಳನ್ನು ಹೊಂದಿರುವ ಕರ್ನಾಟಕ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಹರಿಯಾಣ 26 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 21 ಅಂಕಗಳನ್ನು ಕಲೆ ಹಾಕಿರುವ ಕೇರಳ ದ್ವಿತೀಯ ಸ್ಥಾನದಲ್ಲಿದ್ದು, ಉಭಯ ತಂಡಗಳಿಗೂ ಪ್ರಬಲ ಫೈಪೋಟಿಯಾಗಿದೆ. ತವರಿನ ಲಾಭ ಹೊಂದಿರುವ ಮಾಜಿ ಚಾಂಪಿಯನ್ಸ್ ಕರ್ನಾಟಕ, ಬೋನಸ್ ಪಾಯಿಂಟ್(7 ಅಂಕ)ನೊಂದಿಗೆ ಜಯ ಗಳಿಸಿದರೆ, ಒಟ್ಟು 26 ಅಂಕಗಳೊಂದಿಗೆ ಲೀಗ್ ಹಂತವನ್ನು ಪೂರೈಸಲಿದೆ.
ಕೇರಳದಿಂದ ಪ್ರಬಲ ಪೈಪೋಟಿಈಗ ಹರಿಯಾಣ ಮತ್ತು ಕರ್ನಾಟಕ ಸಮನಾದ ಅಂಕಗಳೊಂದಿಗೆ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲಿವೆ. ಆದರೆ 21 ಅಂಕಗಳನ್ನು ಹೊಂದಿರುವ ಕೇರಳ ಮತ್ತು ಗುಂಪಿನ ಕೊನೆಯ ಸ್ಥಾನಿ ಬಿಹಾರ (ತಿರುವನಂತಪುರಂನ ತುಂಬಾದಲ್ಲಿ ನಡೆಯಲಿರುವ ಪಂದ್ಯ) ನಡುವಿನ ಪಂದ್ಯದ ಫಲಿತಾಂಶವು ಕರ್ನಾಟಕ ಮತ್ತು ಹರಿಯಾಣ ತಂಡಗಳ ಮೇಲೆ ಪರಿಣಾಮ ಬೀರಲಿದೆ.
ಕರ್ನಾಟಕ ತಂಡದಲ್ಲಿ ಕೆಎಲ್ ರಾಹುಲ್ ರಾಷ್ಟ್ರೀಯ ಸೇವೆಯಲ್ಲಿದ್ದ ಕಾರಣ ದೇಶೀಯ ಟೂರ್ನಿಗಳಿಗೆ ಅಲಭ್ಯರಾಗಿದ್ದ ಸ್ಟಾರ್ ಬ್ಯಾಟರ್ ಕೆ.ಎಲ್. ರಾಹುಲ್, 2020ರ ನಂತರ ಮೊದಲ ಸಲ ರಣಜಿ ಟ್ರೋಫಿ ಆಡಲು ಸಜ್ಜಾಗಿದ್ದಾರೆ. ಹರಿಯಾಣ ವಿರುದ್ಧ ರಾಹುಲ್ 3ನೇ ಕ್ರಮಾಂಕದಲ್ಲಿಬ್ಯಾಟಿಂಗ್ ಮಾಡಲಿದ್ದಾರೆ ಎಂದು ಕರ್ನಾಟಕ ತಂಡದ ಕೋಚ್ ಯರೇ ಗೌಡ ತಿಳಿಸಿದ್ದಾರೆ. ಹಾಗೆಯೇ ಗಾಯದಿಂದ ಚೇತರಿಸಿಕೊಂಡಿರುವ ವೇಗಿ ವಿದ್ವತ್ ಕಾವೇರಪ್ಪ ಸಹ ಆಡುವ ಬಳಗದಲ್ಲಿಕಾಣಿಸಿಕೊಳ್ಳಲಿದ್ದಾರೆ ಎಂದು ಕೋಚ್ ಸುಳಿವು ನೀಡಿದ್ದಾರೆ.