ತಿಪಟೂರು: ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಜೇಷನ್ ಮತ್ತು ಸಮಾನ ಮನಸ್ಕ ಪ್ರವಾಸಿವಾಹನ ಸಂಘಟನೆಗಳ ವತಿಯಿಂದ, ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆ ಆದೇಶದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಗರದ ಡಾ. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಹೊರಟು, ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಜಿಲ್ಲಾ ಸಹ ಕಾರ್ಯದರ್ಶಿ ಯೋಗೇಶ್, ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ, ರಾಜ್ಯ ಸಾರಿಗೆ ಇಲಾಖೆಯು ನೀಡಿರುವ ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿ.ಪಿ. ಆರ್.ಎಸ್ ಎಂಬ ಅವೈಜ್ಞಾನಿಕವಾದ ಸಾಧನವನ್ನು ಅಳವಡಿಸಲು ನೀಡಿರುವ ಆದೇಶ ತುಂಬಾ ತ್ರಾಸದಾಯಕವಾಗಿದ್ದು, ರಾಜ್ಯದ ಎಲ್ಲಾ ವಾಣಿಜ್ಯ ವಾಹನಗಳು,ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕ- ಮಾಲೀಕರುಗಳಿಗೆ ಇದರಿಂದ ತುಂಬಾ ತೊಂದರೆಯಾಗಲಿದ್ದು, ಬಾರಿ ಸಂಕಷ್ಟದಿಂದ ಜೀವನ ನಡೆಸುತ್ತಿದ್ದೇವೆ. ಈ ಆದೇಶದಿಂದ ಮತ್ತಷ್ಟು ನಾವುಗಳು ಬೀದಿಗೆ ಬರಲಿದ್ದೇವೆ ಎಂದು ತಿಳಿಸಿದರು.
ರಾಜ್ಯ ಜಂಟಿ ಕಾರ್ಯದರ್ಶಿ ಮಹಮ್ಮದ್ ಹುಸೇನ್ ಮಾತನಾಡಿ, ದುಬಾರಿ ತೆರಿಗೆ, ಸ್ಪೀಡ್ ಗವರ್ನರ್ ಬಾಡಿಗೆ ಮಾಡುವ ಖಾಸಗಿ ವಾಹನಗಳು ಹಾಗೂ ದುಬಾರಿ ಇನ್ಸೂರೆನ್ಸ್ ಮುಂತಾದ ಸರ್ಕಾರಿ ವೆಚ್ಚಗಳಿಂದ ಹೈರಾಣುವಾಗಿರುವಂತಹ ರಾಜ್ಯದ ಎಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ- ಮಾಲೀಕರಿಗೆ ನೆರವನ್ನು ನೀಡುವ ಬದಲು, ನಮ್ಮ ಉದ್ಯೋಗಕ್ಕೆ ಪೂರಕವಾಗಿರುವಂತಹ ಅನೇಕ ಕಾಯ್ದೆಗಳು ಇದ್ದರೂ ಕೂಡ,ಅವುಗಳನ್ನು ಅನುಷ್ಠಾನಗೊಳಿಸದೆ ಕೇವಲ ತಮ್ಮ ಸ್ವಾರ್ಥಕ್ಕೆ ರಾಜ್ಯದ ಚಾಲಕ-ಮಾಲೀಕರ ಮೇಲೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ.
ಈ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯದೆ ಇದ್ದಲ್ಲಿಮುಂದಿನ ದಿನದಂದು ರಾಜ್ಯ ಮತ್ತು ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಘಟಕದ ಪದಾಧಿಕಾರಿಗಳಾದ ಸಿದ್ದೇಶ್, ಪ್ರಮೋದ್, ದೀಪುಪ್ರವೀಣ್, ರೋಹಿತ್ ಧ್ರುವರಾಜ್, ಹರೀಶ್, ರಮೇಶ್, ಸಂತೋಷ್ ನಾಗರಾಜ್, ಕುಮಾರಸ್ವಾಮಿ ಮತ್ತು ಮೋಹನ್ ಸೇರಿದಂತೆ ಸಂಘಟನೆಯ ನೂರಾರು ಪದಾಧಿಕಾರಿಗಳು, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ಹಾಗೂ ಮಾಲೀಕರುಗಳು ಹಾಜರಿದ್ದರು.