ಕರ್ನಾಟಕ ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿಯಾಗಬೇಕಾದರೆ ರಾಜ್ಯ ಸರ್ಕಾರಕ್ಕೆ ಸ್ಥಿರತೆಯ ಮತ್ತು ಸುಭದ್ರತೆಯ ಅಡಿಪಾಯ ಬೇಕು. ಹಾಗೆ ಆಗಬೇಕಾದರೆ ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡುವ ಅಹಿಂದ ಹಿನ್ನೆಲೆಯ ಗೌರವಾನ್ವಿತ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಅವರನ್ನು ಕೂರಿಸಲೇಬೇಕಾದ ಅನಿವಾರ್ಯತೆ ಇದೆ. ಹಾಗೆ ಮಾಡಿದರೆ ಮಾತ್ರ ಅವರು ಸಾಮಾಜಿಕ ನ್ಯಾಯ ಪ್ರತಿಪಾದಕ ರಾಗಿ ಉಳಿಯು ತ್ತಾರೆ ಎಂಬ ಅಭಿಪ್ರಾಯ ವನ್ನು ರಾಜ್ಯ ದಾದ್ಯಂತ ಪ್ರತಿಧ್ವನಿಸುತ್ತಿದೆ.
ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರುವ ಪ್ರತಿಪಾದನೆಯನ್ನು ಮುಂದಿಟ್ಟುಕೊಂಡು ಮತ್ತು ಸುಪ್ರೀಂ ಕೋರ್ಟ್ ಸೂಚನೆಯನ್ನು ರಾಜ್ಯ ಸರ್ಕಾರ ಪಾಲಿಸಲೇಬೇಕೆಂಬ ಆಗ್ರಹವನ್ನು ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಇದೊಂದು ಸಾಮಾಜಿಕ ನ್ಯಾಯ ನೀಡುವ ಅತ್ಯಂತ ಪ್ರಮುಖ ಹೋರಾಟ.
ಇಂತಹ ಹೋರಾಟದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಬೀದಿಯಲ್ಲಿ ನಿಲ್ಲಿಸುವ ಅಥವಾ ಅದರ ಅಂತರಂಗ ಮತ್ತು ಬಹಿರಂಗವನ್ನು ಬಯಲು ಮಾಡುವ ಕೆಲಸ ಆಗುತ್ತಿದೆ. ಈ ಕೆಲಸವನ್ನು ಕಾಂಗ್ರೆಸ್ ಪಕ್ಷದ ವಿರುದ್ಧವಾಗಿರುವ ಯಾವುದೇವ್ಯಕ್ತಿಯಾಗಲಿ ಅಥವಾ ಪಕ್ಷವಾಗಲಿ ಮಾಡುತ್ತಿಲ್ಲ. ಸ್ವಯಂ ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಅಥವಾ ಸಂವಿಧಾನ ವಿರೋಧಿ ನೀತಿಯನ್ನು ಖಂಡಿಸಿ ಜನಸಾಮಾನ್ಯರು ಮೂರು ದಶಕಗಳ ಕಾಲ ಬೀದಿಯಲ್ಲಿ ಹೋರಾಟ ಮಾಡಿದ ನಂತರ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತನ್ನಿ ಎಂದು ಆಗ್ರಹ ಪಡಿಸುತ್ತಿದ್ದಾರೆ.
ಏನಿದು ಹೋರಾಟ? ಯಾರು ಮಾಡುತ್ತಿದ್ದಾರೆ? ಏಕೆ ಮಾಡುತ್ತಿದ್ದಾರೆ? ಈ ಮೂರು ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ಉತ್ತರ ನೀಡಬೇಕಿದೆ. ಮೀಸಲಾತಿ ಯಾವ ಸಮುದಾಯಗಳಿಗೆ ಸಿಗಬೇಕು ಎಂಬುದನ್ನು ನಿರ್ಧಾರ ಮಾಡುವ ವಿಷಯದಲ್ಲಿ ಎಲ್ಲಾ ಪಕ್ಷಗಳ ನೇತೃತ್ವದ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಾದಿಗ ಸಮಾಜ ಎಲ್ಲಾ ರಂಗದಲ್ಲಿಯೂ ತಮಗೆ ಸಿಗಬೇಕಾದ ಸವಲತ್ತುಗಳನ್ನು ಪಡೆಯದೆ ಯಾರದೋ ಮುಲಾಜಿಗೆ ಒಂದಿಷ್ಟು ಸವಲತ್ತು ಪಡೆದು ಅಲ್ಪ ತೃಪ್ತಿ ಹೊಂದುತ್ತಾ ಬಂದಿತ್ತು.
ಮೂರೂವರೆ ದಶಕಗಳ ಹಿಂದೆ ಆಂಧ್ರಪ್ರದೇಶದಲ್ಲಿ ಮೀಸಲಾತಿ ಹಂಚಿಕೆಯ ಅಸಮಾನತೆಯನ್ನು ಪ್ರಶ್ನಿಸಿದ ಮಾದಿಗ ಸಮಾಜ” ಮಾದಿಗ ದಂಡೋರ” ಸಂಘಟನೆಯ ಮೂಲಕ ತನ್ನ ಹೋರಾಟವನ್ನು ಆರಂಭಿಸಿತು. ಈ ಹೋರಾಟ ಕರ್ನಾಟಕದಲ್ಲಿ ದಲಿತ ಚಳುವಳಿಯ ಮೇಲೆ ಪ್ರಭಾವ ಬೀರಿದ್ದು ಸುಳ್ಳಲ್ಲ.
ಕರ್ನಾಟಕದಲ್ಲಿ ಪ್ರಬಲ ಶಕ್ತಿಯಾಗಿದ್ದ ದಲಿತ ಸಂಘರ್ಷ ಸಮಿತಿ ಈ ವಿಷಯವನ್ನು ಅರ್ಥ ಮಾಡಿಕೊಂಡು ಮೀಸಲಾತಿ ವರ್ಗೀಕರಣ ಹೋರಾಟವನ್ನು ಕೈಗೆತ್ತಿಕೊಂಡಿತು. ಅಲ್ಲಿಂದ ಆರಂಭವಾದ ಮಾದಿಗ ಸಮಾಜದ ಮೇಲಿನ ಮಮತೆಗೆ ವಿಧಾನ ಪರಿಷತ್ತಿನ ಸದಸ್ಯತ್ವ ಸ್ಥಾನ ಲಭ್ಯವಾಯಿತು.
ಇದಕ್ಕೆ ಮುಖ್ಯ ಕಾರಣ ಕೆ.ಹೆಚ್. ಮುನಿಯಪ್ಪ. ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಬಳಿ ಹಕ್ಕೊತ್ತಾಯ ಮಂಡಿಸಿ ಮಾದಿಗ ಸಮುದಾಯದ ಬೌದ್ಧಿಕ ಶಕ್ತಿಯಾಗಿದ್ದ ಡಾ. ಎಲ್ ಹನುಮಂತಯ್ಯ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಂತೆ ಮಾಡಿದರು. ಅಲ್ಲಿಂದ ಆರಂಭವಾದ ಮಾದಿಗ ಸಮಾಜದ ಮೇಲೆ ಬಿದ್ದ ಬೆಳಕು ದಿನ ದಿನಕ್ಕೂ ಹೆಚ್ಚಾಗುತ್ತಲೇ ಹೋಯಿತು. ಕರ್ನಾಟಕ ರಾಜ್ಯದಲ್ಲಿ ಮಾಪಣ್ಣ ಹದನೂರು, ಪಾವಗಡ ಶ್ರೀರಾಮ್, ರಾಯಚೂರು ಬಿ ನರಸಪ್ಪ, ಕೆ ಬಿ ನರಸಿಂಹಯ್ಯ, ಕೇಶವಮೂರ್ತಿ, ಚಿಂತಾಮಣಿ ವೆಂಕಟ ರೋಣಪ್ಪ, ಗಂಗಾವತಿಯ ಬಿ ಹುಸೇನಪ್ಪ ಸ್ವಾಮಿ ಮಾದಿಗ, ಮುಂತಾದವರ ನೇತೃತ್ವದಲ್ಲಿ ಪ್ರಬಲ ಹೋರಾಟಗಳು ನಡೆದವು.
ದಲಿತ ಸಂಘರ್ಷ ಸಮಿತಿಯ ಅನೇಕ ನಾಯಕರು ಈ ಹೋರಾಟವನ್ನು ಬೆಂಬಲಿಸಿದರು ಮತ್ತು ಅವರೂ ಸಹ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಹೋರಾಟಗಳನ್ನು ಮಾಡಿದರು.ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಡಾ. ಎಲ್ ಹನುಮಂತಯ್ಯ ಅವರು ರಾಜ್ಯದ ಎಲ್ಲಾ ಶಾಸಕರ ಸಹಿ ಪಡೆದು ಸದನದಲ್ಲಿ ಮುಖ್ಯಮಂತ್ರಿಗಳಿಗೆ ನೀಡಿ ಆಯೋಗದ ರಚನೆಗೆ ಶ್ರಮಿಸಿದ ಘಟನೆಯನ್ನು ಯಾರೂ ಮರೆಯುವಂತಿಲ್ಲ.
ರಾಷ್ಟ್ರಮಟ್ಟದಲ್ಲಿ ಮಂದಕೃಷ್ಣ ಮಾದಿಗ ದೆಹಲಿಯಲ್ಲಿ ನಡೆಸಿದ ಪ್ರತಿಭಟನಾ ಸಭೆಗಳು, ಹೈದರಾಬಾದ್ ನ ಬೃಹತ್ ಮಹಾಸಮ್ಮೇಳನಗಳು ಕೇಂದ್ರ ಸರ್ಕಾರಕ್ಕೆ ಮಾದಿಗರಿಗೆ ಆಗಿರುವ ಮೀಸಲಾತಿ ಅನ್ಯಾಯದ ಬಗ್ಗೆ ಗಮನ ನೀಡುವಂತೆ ಮಾಡಿದ್ದು ಸರಿಯಷ್ಟೇ. ಕರ್ನಾಟಕದಲ್ಲಿ ಸದಾಶಿವ ಆಯೋಗ ವರದಿ ಜಾರಿಗೆ ತರುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಚಾಣಾಕ್ಷತನದಿಂದ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್ ಆಂಜನೇಯ ಅವರ ಹೆಗಲಿಗೆ ಹಾಕಿ ನರೇಂದ್ರ ಸ್ವಾಮಿ ಸೇರಿದಂತೆ ಕೆಲವು ಸಂಕುಚಿತ ಸಚಿವ ಶಾಸಕರ ಪ್ರತಿರೋಧವನ್ನು ಸೃಷ್ಟಿಸಿದ್ದು ಇತಿಹಾಸ.
ಅಂದು ಕೇಂದ್ರ ಸಚಿವರಾಗಿದ್ದ ಕೆ ಹೆಚ್ ಮುನಿಯಪ್ಪ ಸಮಯೋಚಿತ ನಿರ್ಧಾರ ಮಾಡಿ ಸದಾಶಿವ ಆಯೋಗದ ವರದಿ ಜಾರಿ ಪರಿಶೀಲನೆಗೆ ಸಮಿತಿ ನೇಮಿಸುವಂತೆ ಮಾಡಿದರು. ಆನಂತರ ನಡೆದಿದ್ದೆಲ್ಲಾ ರಾಜಕೀಯ ಮೇಲಾಟಗಳು.ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರದಲ್ಲಿ ಮಾದಿಗ ಸಮುದಾಯದ ನಾಯಕತ್ವ ಮಂದಕೃಷ್ಣ ಮಾದಿಗರದು ಎಂದು ಗೊತ್ತಾದ ಮೇಲೆ ಅವರಿಗೆ ವಿಶೇಷ ಮನ್ನಣೆ ನೀಡಿದರು.
ಹೈದರಾಬಾದ್ ನಲ್ಲಿ ನಡೆದ ಮಾದಿಗ ಸಮುದಾಯದ ವಿರಾಟ್ ಪ್ರದರ್ಶನ ಸಭೆಯಲ್ಲಿ ಪ್ರಧಾನಮಂತ್ರಿಯ ಭಾಗಿಯಾದರು. ಮಾದಿಗ ಸಮುದಾಯಕ್ಕೆ ಆಗಿರುವ ಮೀಸಲಾತಿ ಅನ್ಯಾಯವನ್ನು ನಾನು ಸರಿಪಡಿಸುತ್ತೇನೆ ಎಂದು ವಾಗ್ದಾನ ನೀಡಿದರು. ಕೊಟ್ಟ ಮಾತಿನಂತೆ ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ಪೀಠವನ್ನು ರಚಿಸಿ ಅವರಿಂದ ಒಳ ಮೀಸಲಾತಿ ವಿಷಯದಲ್ಲಿ ಆಯಾ ರಾಜ್ಯಗಳೇ ನಿರ್ಣಯವನ್ನು ತೆಗೆದುಕೊಳ್ಳಬಹುದು ಎಂಬ ನಿರ್ದೇಶನ ಕೊಡಿಸಿದ್ದಾರೆ.
ಈಗ ಕಾಂಗ್ರೆಸ್ ಪಕ್ಷ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತೆ ಒದ್ದಾಡುತ್ತಿದೆ.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಅದರಲ್ಲಿಯೂ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಸುಪ್ರೀಂಕೋರ್ಟ್ ನ ಆದೇಶವನ್ನು ಜಾರಿಗೆ ತರಬೇಕು ಇಲ್ಲವೇ ಸಿದ್ದರಾಮಯ್ಯ ಅವರಿಂದಲೇ ರಾಷ್ಟ್ರ ನಾಯಕತ್ವವನ್ನು ಬಿಟ್ಟುಕೊಟ್ಟು ರಾಜ್ಯ ರಾಜಕಾರಣದಲ್ಲಿ ಅನಿವಾರ್ಯವಾಗಿ ಉಳಿದಿರುವ ಮತ್ತು ಉಪಮುಖ್ಯಮಂತ್ರಿ ಅಥವಾ ಗೃಹ ಮಂತ್ರಿ ಆಗಬಹುದಾಗಿದ್ದ ಕೆ.ಎಚ್. ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಗೌರವದಿಂದ ಬಿಟ್ಟುಕೊಡುವ ಉದಾರತೆಯನ್ನು ತೋರುವ ಔದಾರ್ಯ ಎದುರಾಗಿದೆ.ಇಲ್ಲವಾದರೆ ಇತಿಹಾಸದಲ್ಲಿ ಸಾಮಾಜಿಕ ಅಸಮಾನತೆ ಪೋಷಿಸಿ ಬೆಳೆಸಿದ ಅಥವಾ ಮಾದಿಗರಿಗೆ ಮಹಾ ಮೋಸ ಮಾಡಿದ ಅಪಕೀರ್ತಿ ಕಾಂಗ್ರೆಸ್ ಪಕ್ಷದ ಮೇಲೆ ಇರುತ್ತದೆ.