ಬೆಂಗಳೂರು: ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಪುತ್ರ ಜೈದ್ ಖಾನ್ ಅವರ ನಿರ್ಮಾಣದ ಕಲ್ಟ್ ಚಿತ್ರದ ತಂಡದ ವತಿಯಿಂದ ಡ್ರೋನ್ ತಂತ್ರಜ್ಞನಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆತ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಈ ಸಂಬಂಧ ಆತ್ಮಹತ್ಯೆಗೆ ಯತ್ನಿಸಿದ ಎನ್ನಲಾದ ತಂತ್ರಜ್ಞ ಸಂತೋಷ್ ಎಂಬಾತನ ಸಹೋದರಿ ಮಾಗಡಿರೋಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದಾರೆ.ಕಲ್ಟ್ ಚಿತ್ರತಂಡದ ವತಿಯಿಂದ ಸಂತೋಷ್ ಎಂಬ ಡ್ರೋನ್ ತಂತ್ರಜ್ಞ ದಿನಕ್ಕೆ 25 ಸಾವಿರ ರೂ.ನಂತೆ ನಿಗದಿ ಮಾಡಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ, ನವೆಂಬರ್ 25ರಂದು ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ವಿಂಡ್ ಫ್ಯಾನ್ಗೆ ಡ್ರೋನ್ ತಗಲಿ ತುಂಡಾಗಿತ್ತು. ಇದರ ನಷ್ಟ ಪರಿಹಾರವನ್ನು ನೀಡುವಂತೆ ಸಂತೋಷ್ ಒತ್ತಾಯಿಸಿದ್ದ.
ಆದರೆ ಪರಿಹಾರ ನೀಡದೇ ಆತನ ಡ್ರೋನ್ನ ಮೆಮೋರಿಕಾರ್ಡ್ ಕಿತ್ತುಕೊಂಡು ಜೈದ್ ಖಾನ್ ಮತ್ತಿರರು ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಸುಮಾರು ಒಂದೂವರೆ ಲಕ್ಷ ರೂ. ಬೆಲೆ ಬಾಳುವ ಮೆಮೋರಿ ಕಾರ್ಡ್ನ್ನು ಕಿತ್ತುಕೊಂಡ ಹಿನ್ನೆಲೆಯಲ್ಲಿ ಮನನೊಂದ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದರು.
ಈ ಸಂಬಂಧ ಆತನ ಸಹೋದರಿ ದೂರು ನೀಡಿದ ಪರಿಣಾಮ ಚಿತ್ರ ತಂಡದವರನ್ನು ಮಂಗಳವಾರ ವಿಚಾರಣೆಗೆ ಬರಲು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.