ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಪೋಲಿಸರ ಬಂದೂಕು ಸದ್ದು ಮಾಡಿದೆ. ನಗರದ ಹೊರವಲಯದಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್’ನ ಇಬ್ಬರ ಕಾಲಿಗೆ ಫೈರಿಂಗ್ ಮಾಡಲಾಗಿದೆ.ಆತ್ಮರಕ್ಷಣೆಗೆ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್.ಆರ್.ನಾಯಕ ನೇತೃತ್ವದ ತಂಡ ಆರೋಪಿಗಳಾದ ಗುಜರಾತ್ ಮೂಲದ ನಿಲೇಶ್, ದಿಲೀಪ್ ಕಾಲಿಗೆ ಗುಂಡು ಹೊಡೆದಿದ್ದಾರೆ.
ನಿನ್ನೆ ತಡರಾತ್ರಿ ಬೈಕ್ ಮೇಲೆ ಹೊರಟ್ಟಿದ್ದ ಕುಂದಗೋಳ ಮೂಲದ ವ್ಯಕ್ತಿಗೆ ನಾಲ್ಕೈದು ಜನರ ಗುಂಪು ಅಡ್ಡಗಟ್ಟಿ ಬೈಕ್, ನಗದು, ಮೊಬೈಲ್ ಸುಲಿಗೆ ಮಾಡಿ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಇದಾದ ಸ್ವಲ್ಪ ಸಮಯದಲ್ಲಿ ರವಿಚಂದ್ರ ಎಂಬಾತನನ್ನು ಅಡ್ಡಗಟ್ಟಿ ಸುಲಿಗೆ ಮಾಡಿತ್ತು. ಆಮೇಲೆ ಮಂಟೂರ ರಸ್ತೆಯಲ್ಲಿನ ಶಾರುಕ್ ಎಂಬಾತರ ಮನೆಗೆ ಕನ್ನ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಮನೆಗೆ ಕಲ್ಲು ತೂರಾಟ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬೆಂಡಿಗೇರಿ ಪಿಐ ಎಸ್.ಆರ್.ನಾಯಕ ನೇತೃತ್ವದ ತಂಡ ಅಲರ್ಟ್ ಆಗಿದ್ದು, ಈ ವೇಳೆ ಬೈಕ್ ಮೇಲೆ ಅನುಮಾನಾಸ್ಪದವಾಗಿ ಹೋಗುತ್ತಿದ್ದವರ ತಪಾಸಣೆಗೆ ಮುಂದಾಗಿದ್ದರು.ಅದರಂತೆ ಪಿಎಸ್ಐ ಅಶೋಕ ಹಾಗೂ ಇನ್ನಿಬ್ಬರು ಸಿಬ್ಬಂದಿಗಳು ಹುಬ್ಬಳ್ಳಿಯ ಹೊರವಲಯದ ಬಿಡನಾಳ ಸಮೀಪದಲ್ಲಿ ತಪಾಸಣೆ ನಡೆಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ದರೋಡೆಕೋರರು ಎಸ್ಕೇಪ್ ಆಗಲು ಮುಂದಾಗಿದ್ರು, ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು 4 ಸುತ್ತು ಗುಂಡು ಹಾರಿಸಿದರು. ಬಳಿಕ ಇಬ್ಬರು ಆರೋಪಿಗಳ ಕಾಲಿಗೆ ತಲಾ ಒಂದೊಂದು ಗುಂಡು ಹೊಡೆದರು. ಬಳಿಕ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ಗುಂಡೇಟು ತಿಂದ ದಿಲೀಪ್ & ನಿಲೇಶ್ ‘ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಘಟನೆಯಲ್ಲಿ ಪಿಎಸ್ಐ ಅಶೋಕ, ಮತ್ತು ಪೇದೆಗಳಾದ ಶರಣು ಹಾಗೂ ಮತ್ತೊರ್ವ ಸಿಬ್ಬಂದಿಗೆ ಗಾಯವಾಗಿದೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.