ಗಾಬಾ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಿತ್ತ ಜಸ್ಪ್ರೀತ್ ಬುಮ್ರಾ ಅವರು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಗೌರವಕ್ಕೆ ಇದೀಗ ಪಾತ್ರರಾಗಿದ್ದಾರೆ. ಕಪಿಲ್ ದೇವ್ ಅವರು ಆಸ್ಟ್ರೇಲಿಯಾದಲ್ಲಿ ಆಡಿದ 11 ಟೆಸ್ಟ್ ಪಂದ್ಯಗಳಲ್ಲಿ 51 ವಿಕೆಟ್ ಗಳನ್ನು ಕಬಳಿಸಿದ್ದರು. ಬುಮ್ರಾ ಅವರು ಈ ಸಾಧನೆಯನ್ನು ಕೇವಲ 10 ಟೆಸ್ಟ್ ಪಂದ್ಯದಲ್ಲೇ ಮೀರಿ ನಿಂದಿದ್ದಾರೆ.
ಆರಂಭಿಕ ಉಸ್ಮಾನ್ ಖವಾಜ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬುಮ್ರಾ ಅವರು ಮುಂದಿನ ಓವರ್ ನಲ್ಲೇ ವನ್ ಡೌನ್ ಬ್ಯಾಟರ್ ಮಾರ್ನಸ್ ಲಬುಶೇನ್ ಅವರನ್ನು ಕೀಪರ್ ರಿಷಬ್ ಪಂತ್ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಆ ಬಳಿಕ 18ನೇ ಓವರ್ ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಕೆಎಲ್ ರಾಹುಲ್ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು.