ಬೆಂಗಳೂರು: ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬ ಮಾತಿನ ಪ್ರಕಾರವೇ ಕಾಂಗ್ರೆಸ್ನಲ್ಲಿ ಬಣ ಬಡಿದಾಟ, ಡಿನ್ನರ್ ಪಾಲಿಟಿಕ್ಸ್ ಎರಡು ಕೂಡ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಸಚಿವರುಗಳು ಡಿನ್ನರ್ ಮೀಟಿಂಗ್ ಆಯೋಜನೆ ಮಾಡುತ್ತಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ನೆಪದಲ್ಲಿ ಸಿಎಂ ಸಿದ್ಧರಾಮಯ್ಯರ ಆದಿಯಾಗಿ ಸಚಿವರುಗಳಾದ ಡಾ. ಜಿ.ಪರಮೇಶ್ವರ್, ಡಾ.ಹೆಚ್.ಸಿ. ಮಹದೇವಪ್ಪ ಸೇರಿದಂತೆ ಹಲವರು ಡಿನ್ನರ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದರು.
ಇದಾದ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಖಾಸಗಿ ಹೋಟೆಲ್ನಲ್ಲಿ ಎಸ್ಸಿ, ಎಸ್ಟಿ ಸಮುದಾಯ ಪ್ರತಿನಿಧಿಸುವ ಸಚಿವರುಗಳು, ಶಾಸಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದರು. ಅದ್ರೆ, ಗೃಹ ಸಚಿವರ ಡಿನ್ನರ್ ಮೀಟಿಂಗ್ ಬಗ್ಗೆ ಅರಿತ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹೈಕಮಾಂಡ್ ನಾಯಕರಿಗೆ ವಿಷಯ ತಿಳಿಸಿ, ಮೀಟಿಂಗ್ಗೆ ಬ್ರೇಕ್ ಹಾಕಿದ್ರು. ಆದ್ರೆ, ಇದು ಸಂಪೂರ್ಣವಾಗಿ ಮುಕ್ತಾಯ ಅಲ್ಲ.
ಫುಲ್ ಸ್ಟಾಪ್ ಅಲ್ಲ, ಇದು ಕೇವಲ ಮುಂದೂಡಿಕೆ ಅಷ್ಟೇ ಎಂಬ ಹೊಸ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ಎದ್ದಿದ್ದು, ಇದನ್ನು ಪುಷ್ಟೀಕರಿಸುವಂತೆ ನಾಯಕರುಗಳು ಹೇಳಿಕೆ ನೀಡಲಾರಂಭಿಸಿದ್ದು, ಡಿಕೆಶಿಗೆ ಇದು ನುಂಗಲಾರದ ತುತ್ತಾಗಿದೆ. ಒಂದು ಕಡೆ ಡಿನ್ನರ್ ಮೀಟಿಂಗ್ಗೆಲ್ಲಾ ಬ್ರೇಕ್ ಹಾಕಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಾದ್ರೆ, ನಾನೇ ಆ ಸ್ಥಾನಕ್ಕೆ ಏರಬೇಕು ಎಂಬ ಮನಸ್ಸಿನಿಂದ ಗುರಿಯಿಟ್ಟುಕೊಂಡಿರುವ ಡಿಕೆಶಿಗೆ ಟಕ್ಕರ್ ಕೊಡಲು ಯಾರೇ ಮುಂದಾದ್ರೂ ಅದನ್ನೆಲ್ಲಾ ಕಟ್ಟುನಿಟ್ಟಾಗಿ ತಡೆಯುವ ಕೆಲಸ ನಡೆಯುತ್ತಿದೆ.
ಮುಂದೆ ಸಂಕ್ರಾಂತಿ ಬಳಿಕ ರಾಜ್ಯ ಸರ್ಕಾರದಲ್ಲಿ ಮಹತ್ವದ ಕೆಲ ಬದಲಾವಣೆಗಳು ಆಗಲಿದೆ ಎಂಬ ಚರ್ಚೆಯ ಬೆನ್ನಲ್ಲೇ ಇದೆಲ್ಲಾ ನಡೆಯುತ್ತಿದ್ದು, ಸಮಾಜಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಡಿನ್ನರ್ ಮೀಟಿಂಗ್ ನಿಂತಿಲ್ಲ. ಇದು ಮುಂದೂಡಿಕೆ ಅಷ್ಟೇ ಎಂದಿದ್ದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.ಇನ್ನು ಶತಾಯಗತಾಯ ಮುಖ್ಯಮಂತ್ರಿ ಆಗಲೇಬೇಕೆಂದು ಪಣತೊಟ್ಟಿರುವ ಡಿಸಿಎಂ ಡಿಕೆಶಿಗೆ ಸದ್ಯದಲ್ಲೇ, ಕೆಪಿಸಿಸಿಯ ಅಧ್ಯಕ್ಷ ಸ್ಥಾನ ಬದಲಿಸಬೇಕು. ಆ ಮೂಲಕ ಟಕ್ಕರ್ ಕೊಟ್ಟು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿಸಿಕೊಳ್ಳುವ ಗುರಿಯನ್ನು ಸಿದ್ಧರಾಮಯ್ಯರ ಆಪ್ತ ಬಣ ಮಾಡುತ್ತಿದೆ. ಹೀಗಾಗಿ, ಕಾಂಗ್ರೆಸ್ನಲ್ಲಿ ಈವರೆಗೂ ಬಣ ರಾಜಕಾರಣ, ಡಿನ್ನರ್ ಮೀಟಿಂಗ್ ಯಾವುದೂ ನಿಲ್ಲುವ ಲಕ್ಷಣಗಳು ಗೋಚರವಾಗುತ್ತಿಲ್ಲ.