ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಾಣೆ ಕುರಿತು ವ್ಯಾಪಕ ಊಹಾಪೋಹಗಳು ಕೇಳಿಬರುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಒಗ್ಗಟ್ಟಾಗಿದೆ ಮತ್ತು ಪ್ರತಿಪಕ್ಷಗಳು ಸರ್ಕಾರದ ಮೇಲೆ ಇಲ್ಲ ಸಲ್ಲದ ಕಥೆಗಳನ್ನು ಹೆಣೆಯುತ್ತಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೋಮವಾರ ಹೇಳಿದ್ದಾರೆ.
ಬಿಜೆಪಿಯೊಳಗೆ ಮತ್ತು ಜೆಡಿಎಸ್ನೊಂದಿಗಿನ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಇದೆ ಎಂದು ಪ್ರತಿಪಾದಿಸಿದ ಅವರು, ಕಾಂಗ್ರೆಸ್ನೊಳಗಿನ ಅಧಿಕಾರದ ಗುದ್ದಾಟ ಕೇವಲ ಮಾಧ್ಯಮ ಸೃಷ್ಟಿ ಎಂದು ಬಿಂಬಿಸಲು ಪ್ರಯತ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಘರ್ಷಣೆಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು ಕೆಲವು ಆಯ್ದ ಸುದ್ದಿ ವಾಹಿನಿಗಳು, ಪ್ರತಿ ಕನ್ನಡಿಗರ ಕುಟುಂಬಕ್ಕೆ ನೇರ ನಗದು ವರ್ಗಾವಣೆ ಮಾಡುತ್ತಿರುವ ಏಕೀಕೃತ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುತ್ತಿವೆ. ಈ ಮೂಲಕ 58,000 ಕೋಟಿ ರೂ.ಗಳನ್ನು ನೀಡುತ್ತಿದೆ ಎಂದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಯು ಭಾರತದ ಅತಿದೊಡ್ಡ ಕಲ್ಯಾಣ ಉಪಕ್ರಮವಾಗಿದ್ದು, ಸ್ವಾಭಾವಿಕವಾಗಿ, ಬಿಜೆಪಿಯು ಇದರಿಂದ ವಿಚಲಿತವಾಗಿದೆ. ರಾಜ್ಯದಲ್ಲಿ ಕೇಸರಿ ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿದ್ದು, ಬಿಜೆಪಿ ಮತ್ತು ಅದರ ಮೈತ್ರಿ ಪಾಲುದಾರ ಜೆಡಿಎಸ್ ಜಿದ್ದಾಜಿದ್ದಿಯಲ್ಲಿ ತೊಡಗಿವೆ ಎಂದು ದೂರಿದರು.
‘ತಮ್ಮ ದುಷ್ಕೃತ್ಯಗಳು ಮತ್ತು ವೈಫಲ್ಯಗಳನ್ನು ಮರೆಮಾಚುವ ಪ್ರಯತ್ನದಲ್ಲಿ, ಪ್ರತಿಪಕ್ಷಗಳು ಕಾಂಗ್ರೆಸ್ ಮತ್ತು ಅದರ ಖಾತರಿಗಳ ಮೇಲೆ ದಾಳಿ ಮಾಡಲು ಕಥೆಗಳನ್ನು ಹೆಣೆಯುತ್ತಲೇ ಇವೆ. ಅವರು ಕೇವಲ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅಥವಾ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡಿಲ್ಲ. ವಾಸ್ತವದಲ್ಲಿ ಕರ್ನಾಟಕದ ಜನರ ಮೇಲೆ ದಾಳಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಖಾತರಿಗಳು ಮತ್ತು ಕರ್ನಾಟಕದ ಜನತೆಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನಡೆಸುವ ಪ್ರತಿಯೊಂದು ದುರುದ್ದೇಶಪೂರಿತ ನಡೆಯನ್ನು ನಾವು ಎದುರಿಸುತ್ತೇವೆ’ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ ಸುರ್ಜೇವಾಲಾ ಅವರು ಈ ಹೇಳಿಕೆ ನೀಡಿದ್ದಾರೆ.
‘ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಖುರ್ಚಿ ಖಾಲಿ ಇಲ್ಲದಿದ್ದರೂ ಸಿಎಂ ಬದಲಾಯಿಸುತ್ತಾರೆ ಎಂದು ಮಾಧ್ಯಮಗಳು ಪದೇ ಪದೆ ವರದಿ ಮಾಡುತ್ತಿವೆ. ಇಂತಹ ಹೇಳಿಕೆಗಳು ಪದೇ ಪದೆ ಬರುತ್ತಲೇ ಇವೆ. ಊಟದ ವಿಚಾರವಾಗಿ ಭೇಟಿಯಾದರೆ ರಾಜಕೀಯ ಚರ್ಚೆ ಎಂಬಂತೆ ಊಹಾಪೋಹಗಳು ಹರಿದಾಡುತ್ತಿವೆ. ಕೆಲವೊಮ್ಮೆ ಕೇವಲ ಊಹಾಪೋಹಗಳ ಆಧಾರದ ಮೇಲೆ ನಾವು ಏನನ್ನು ಚರ್ಚಿಸಿದ್ದೇವೆ ಎಂಬುದರ ಕುರಿತು ಹೇಳಿಕೆಗಳನ್ನು ಸಹ ರಚಿಸಲಾಗಿದೆ’ ಎಂದು ಸಿಎಂ ಹೇಳಿದರು.
ದಲಿತ ಮತ್ತು ಎಸ್ಟಿ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಸಿದ್ದರಾಮಯ್ಯನವರ ಇತ್ತೀಚಿನ ಔತಣಕೂಟದ ನಂತರ, ಮಾರ್ಚ್ ಬಜೆಟ್ ನಂತರ ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಅಡಿಯಲ್ಲಿ ಮುಖ್ಯಮಂತ್ರಿಯ ಬದಲಾವಣೆ ಸಾಧ್ಯತೆ ಇದೆ ಎನ್ನುವ ಬಗ್ಗೆ ಊಹಾಪೋಹಗಳು ಹರಡಿವೆ.
ಸಚಿವರೂ ಸೇರಿದಂತೆ ಪಕ್ಷದ ಹಲವು ನಾಯಕರು ನಾಯಕತ್ವ ಬದಲಾವಣೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಕೆಲವರು ಅದರ ಸಾಧ್ಯತೆಯ ಬಗ್ಗೆ ಸುಳಿವು ನೀಡಿದರೆ, ಇತರರು ಅದನ್ನು ತಳ್ಳಿಹಾಕಿದ್ದಾರೆ.