ಹರದನಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಸೇಡಿನ ರಾಜಕಾರಣವನ್ನು ಆರಂಭಿಸಿದ್ದು, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಪ್ರತಿಪಕ್ಷ ನಾಯಕರ ಮೇಲೆ ಪೊಲೀಸ್ ಬಲ ಪ್ರಯೋಗಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಸೋಮವಾರ ಹೇಳಿದರು.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥ ದೇಗುಲ ಹಾಗೂ ಹರದನಹಳ್ಳಿಯ ದೇವೇಶ್ವರ ಸ್ವಾಮಿದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಪ್ರಕರಣ ಬೇಧಿಸುವ ಭರದಲ್ಲಿ ಪೊಲೀಸರು ನೊಂದವರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ಕಾನೂನನ್ನು ಗಾಳಿಗೆ ತೂರಿದ್ದಾರೆಂದು ಕಿಡಿಕಾರಿದರು.
ಕೆಲವು ಪೊಲೀಸ್ ಅಧಿಕಾರಿಗಳ ಇಟ್ಟುಕೊಂಡು ವಿರೋಧಿಗಳನ್ನು ದಮನ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಜನಪ್ರತಿನಿಧಿಯಾಗಿರುವ ಸಿ.ಟಿ.ರವಿ ಅವರನ್ನು ರಾತ್ರಿಯೆಲ್ಲಾ ಸುತ್ತಿಸಬೇಕಿತ್ತಾ?. ಬಂಧಿಸುವುದಿದ್ದರೆ ನೇರವಾಗಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟಿಗೆ ಕರೆದುಕೊಂಡು ಬರಬಹುದಿತ್ತು. ಬಿಜೆಪಿ ಸ್ನೇಹಿತರು ಸರಿಯಾದ ರೀತಿ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಿದರೆ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗ್ತಾರೆ ಎಂದು ಹೇಳಿದರು.
ವಿರೋಧಿಗಳನ್ನು ಸದೆಬಡಿಯಲು ಈ ರೀತಿಯ ಕಾನೂನಿನ ಉಲ್ಲಂಘನೆ ಹಾಗೂ ದುರುಪಯೋಗ ಸರ್ಕಾರದಿಂದಲೇ ಆಗುತ್ತಿದೆ. ಈ ಹಿಂದೆ ಕರ್ನಾಟಕ ಪೊಲೀಸ್ ಇಲಾಖೆ, ದೇಶದಲ್ಲೇ ಉತ್ತಮ ಇಲಾಖೆ ಎಂಬ ಪ್ರಶಂಸೆಗೆ ಪಾತ್ರವಾಗಿತ್ತು. ಆ ಗೌರವವನ್ನು ಮಣ್ಣುಪಾಲು ಮಾಡುವ ನಿಟ್ಟಿನಲ್ಲಿ ಇಂದು ಕೆಲಸ ಮಾಡುತ್ತಿದ್ದಾರೆ. ಕೆಲ ಪೊಲೀಸ್ ಅಧಿಕಾರಿಗಳು ಕೆಲವರ ನಿರ್ದೇಶನದಂತೆ ನಡೆದುಕೊಳ್ಳುತ್ತಿರುವುದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಪರಮೇಶ್ವರ್ ಅವರು ಕ್ರಿಯಾಶೀಲರೇ? ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಯೇ? ದಶಕಗಳಷ್ಟು ಹಳೆಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡು ಸೇಡು ತೀರಿಸಿಕೊಳ್ಳುವ ಹೊಸ ರಾಜಕಾರಣವನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಮುಂದೆಯೂ ಇದೇ ರೀತಿ ಸೇಡಿನ ರಾಜಕಾರಣ ಮುಂದುವರೆಯುವ ಸಾಧ್ಯತೆ ಇದೆ ಎಂದರು.ಈ ಸಂದರ್ಭಧಲ್ಲಿ ಶಾಸಕ ಹೆಚ್ ಡಿ ರೇವಣ್ಣ, ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಉಪಸ್ಥಿತರಿದ್ದರು.