ಬೆಂಗಳೂರು: ವಿಧವೆ ಮದುವೆಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧವೇ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.ಶೇಷಾದ್ರಿಪುರಂ ಠಾಣೆ ಕಾನ್ಸ್ಟೇಬಲ್ ಮನೋಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕಳೆದ 2016 ರಲ್ಲಿ ಮಹಿಳೆಯ ಪತಿ ಕೊಲೆಯಾಗಿದ್ದು, ಈ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆಗ ಆರೋಪಿ ಮನೋಜ್ ಶೇಷಾದ್ರಿಪುರಂ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿದ್ದ. ಪತಿಯ ಕೊಲೆ ಪ್ರಕರಣದ ಸಲುವಾಗಿ ಆರೋಪಿಗಳಿಗೆ ಸಮನ್ಸ್ ಜಾರಿಯಾಗಿತ್ತು. 2019 ರಲ್ಲಿ ಸಮನ್ಸ್ ಕಾಪಿ ಕೊಡಲು ಶೇಷಾದ್ರಿಪುರಂ ಠಾಣೆಗೆ ಮಹಿಳೆ ತೆರಳಿದ್ದರು. ಆ ಸಂದರ್ಭದಲ್ಲಿ ಮಹಿಳೆಯ ಫೋನ್ನಂಬರ್ ಪಡೆದಿದ್ದ ಕಾನ್ಸ್ಟೇಬಲ್ ಮನೋಜ್ ನಂತರ ದಿನಗಳಲ್ಲಿ ಆಕೆಯೊಂದಿಗೆ ಸಲುಗೆ ಬೆಳೆಸಿ ಇಬ್ಬರು 2024ರ ನವೆಂಬರ್ 28ರಂದು ರಿಜಿಸ್ಟರ್ ಮದುವೆಯಾಗಿದ್ದರು. ಈ ಸಂದರ್ಭದಲ್ಲಿ ಮನೋಜ್ ಕುಟುಂಬದವರು ಇದನ್ನು ವಿರೋಧಿಸಿದ್ದರು.
ಇತ್ತೀಚೆಗೆ ಬರುಬರುತ್ತಾ ಮನೋಜ್ ಮಹಿಳೆಗೆ ಕಿರುಕುಳ ನೀಡುತ್ತಾ ಅವಳ ಮೇಲೆ ಹಲ್ಲೆ ನಡೆಸಿದ್ದು, ಇದಾದ ನಂತರ ಆತನ ಮೊಬೈಲ್ನಲ್ಲಿ ಬೇರೆ ಮಹಿಳೆಯೊಂದಿಗೆ ಇಬ್ಬರು ಒಟ್ಟಿಗೆ ಇರುವುದು ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ನಡೆಸಿದ ಪರಿಣಾಮ ಆಕೆ ವರದಕ್ಷಿಣೆ ಕಿರುಕುಳ ಹಾಗೂ ತನಗೆ ದೈಹಿಕ ಹಿಂಸೆ ನೀಡುತ್ತಿರುವುದಾಗಿ ದೂರು ನೀಡಿದ್ದಾಳೆ.
ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.