ಕಾರವಾರ: ಕಾರ್ಖಾನೆಯಲ್ಲಿ ರಾಸಾಯನಿಕ ಸೋರಿಕೆಯಿಂದ 18 ಕಾರ್ಮಿಕರು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಬಳಿಯ ಆದಿತ್ಯ ಬಿರ್ಲಾ ಗ್ರೂಪ್ನ ಕಾಸ್ಟಿಕ್ ಸೋಡಾ ಉತ್ಪಾದಿಸುವ ಗ್ರಾಸಿಮ್ ಇಂಡಸ್ಟ್ರೀಸ್ನಲ್ಲಿ ನಡೆದಿದೆ. ಕಾರವಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರವಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನೀಲಕಂಠ, ಜಹನ್ನೂರು, ಕಮಲೇಶ್ ವರ್ಮಾ, ನಂದಕಿಶೋರ್, ದೀಪು, ಸೃಜನ್, ನಜೀದುಲ್ಲಾ, ಬೇಜನ್ ಕುಮಾರ್, ಕಿಶನ್ ಕುಮಾರ್, ಅಜೀಜ್, ಮೋಹಿತ್ ವರ್ಮಾ ಸೇರಿದಂತೆ ಕರ್ನಾಟಕ, ಉತ್ತರಪ್ರದೇಶ ಮತ್ತು ಬಿಹಾರ ಮೂಲದ 18 ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
ಸದ್ಯ ಸ್ಥಳಕ್ಕೆ ಡಿವೈಎಸ್ಪಿ ಗಿರೀಶ್ ಹಾಗೂ ಪೊಲೀಸರ ತಂಡ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ಕಾರ್ಮಿಕರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಕೆಲ ದಿನದ ಹಿಂದೆ ಕ್ಲೋರಿನ್ ಸೋರಿಕೆಯಿಂದ ಬಿಣಗಾ ಗ್ರಾಮದ ನಿವಾಸಿ ನಾಗರಾಜ್ ಎಂಬುವವರು ಮೃತಪಟ್ಟಿದ್ದರು.
ಅನಾಹುತ ಸಂಭವಿಸಿದರೂ ಕಂಪನಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿಲ್ಲ. 2 ಗಂಟೆಗಳಿಂದ ಯಥಾವತ್ತಾಗಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರನ್ನೂ ಹೊರಕಳಿಸಿ ಕೆಲಕಾಲ ಕಂಪನಿ ಸ್ಥಗಿತಗೊಳಿಸದೆ ನಿರ್ಲಕ್ಷ್ಯವಹಿಸಿದೆ. ರಾಸಾಯನಿಕ ಒಳಗೆ ಆವರಿಸಿರುವ ಹಿನ್ನೆಲೆ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
ಇನ್ನು ಘಟನೆ ಕಂಪನಿಯ ಬೇಜವಾಬ್ದಾರಿ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ಮಾಡಲಾಗಿದೆ. ನಗರಸಭೆ ಸದಸ್ಯರಾದ ಶ್ವೇತಾ, ಪ್ರಕಾಶ್ ಮತ್ತು ರುಕ್ಮಿಣಿ ಗೌಡ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದು, ಕಾರ್ಖಾನೆಯಲ್ಲಿರುವ ಎಲ್ಲಾ ಸಿಬ್ಬಂದಿಯನ್ನು ಹೊರ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ತಹಶೀಲ್ದಾರ್ ಎನ್ಎಫ್ ನೊರೋನ್ಹಾ ನೇತೃತ್ವದಲ್ಲಿ ಪ್ರತಿಭಟನಾಕಾರರ ಮನವೊಲಿಕೆ ಮಾಡಲಾಗಿದೆ.