ಬೆಂಗಳೂರು: ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುವ ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗದಿಂದ ಬೆಂಗಳೂರು ನಗರ ಜಿಲ್ಲೆಯನ್ನು ಮುಕ್ತಗೊಳಿಸಲು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ 21-10-2024 ಇಂದ 20-11-2024 ವರೆಗೆ ಹಮ್ಮಿಕೊಂಡಿರುವ ಆರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ನೂರರಷ್ಟು ಗುರಿ ಮುಟ್ಟಲು ಕ್ರಮವಹಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ ಜಗದೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಕಾಲುಬಾಯಿ ರೋಗ ಲಸಿಕ ಕಾರ್ಯಕ್ರಮದ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.ಕಾಲುಬಾಯಿ ರೋಗವು ಮಾರಣಾಂತಿಕವಲ್ಲದಿದ್ದರೂ ಜಾನುವಾರುಗಳ ಸಹಜ ಕಾರ್ಯ ಚಟುವಟಿಕೆಗಳಿಗೆ , ಹಾಲು ಉತ್ಪನ್ನ ಹಾಗೂ ಸಂತಾನೋತ್ಪತ್ತಿಯಲ್ಲಿ ತಡೆ ಉಂಟುಮಾಡುವುದರಿಂದ ರೈತರಿಗೆ ಆರ್ಥಿಕ ಹೊಡೆತ ಬೀಳುತ್ತದೆ.
ಆದ್ದರಿಂದ ಈ ಅಭಿಯಾನವನ್ನು ಪ್ರಥಮಾಧ್ಯತೆ ಮೇರೆಗೆ ಯಶಸ್ವಿಗೊಳಿಸಲು ಅಧಿಕಾರಿಗಳು ಒಟ್ಟಾಗಿ ಶ್ರಮಿಸಬೇಕೆಂದು ಅವರು ಸಲಹೆ ನೀಡಿದರು.
ಕೆಲವು ರೈತರು ಈ ಲಸಿಕೆ ನೀಡಿಕೆಯನ್ನು ವಿರೋಧಿಸುವ ಸಂಭವವಿರುವುದರಿಂದ ಅಧಿಕಾರಿಗಳು ಅವರ ಮನವೊಲಿಸಿ ಈ ಲಸಿಕಾ ಕಾರ್ಯಕ್ರಮವನ್ನು ಶೇಕಡ 100ರಷ್ಟು ಪೂರ್ಣಗೊಳಿಸಲು ಶ್ರಮಿಸಬೇಕು. ಅಲ್ಲದೆ, ಯಾವುದೇ ಅಹಿತಕರ ಘಟನೆಗಳು ಆಗದಂತೆ ಎಚ್ಚರಿಕೆಯಿಂದ ಲಸಿಕೆ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಅವರು ಸೂಚಿಸಿದರು.
2019ರ ಸಾಲಿನ ಜಾನುವಾರು ಗಣತಿ ಪ್ರಕಾರ ಬೆಂಗಳೂರುನಗರ ಜಿಲ್ಲೆಯಲ್ಲಿ 1,53, 861 ಹಸುಗಳು ಇದ್ದು, 11,168 ಎಮ್ಮೆಗಳು ಇದೆ. ಇವುಗಳಲ್ಲಿ ಆರನೇ ಸುತ್ತಿನ ಕಾಲು ಬಾಯಿ ರೋಗಕ್ಕೆಲಭ್ಯವಿರುವ ರಾಸುಗಳ ಸಂಖ್ಯೆ 1,28,787 ಹಾಗೂ 4,086 ಎಮ್ಮೆಗಳು ಎಂದು ಪಶುಪಾಲನಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಡಾ. ಚಂದ್ರಶೇಖರ್ ಅವರು ತಿಳಿಸಿದರು.
ಈ ಅಭಿಯಾನಕ್ಕಾಗಿ ಕಳೆದ ಬಾರಿ ಅಂದರೆ ಐದನೇ ಸುತ್ತಿನಲ್ಲಿ ಉಳಿಕೆಯಾದಂತಹ 9,813 ಡೋಸ್ ಗಳು ಹಾಗೂ ಈ ಬಾರಿ ಲಭ್ಯವಿರುವ ಒಂದು ಲಕ್ಷದ 1,26,000 ಡೋಸ್ ಗಳನ್ನು ಸೇರಿ ಒಟ್ಟು 1,35,813 ಲಸಿಕೆಗಳು ಲಭ್ಯವಿವೆ ಎಂದು ಅವರು ಸಭೆಗೆ ತಿಳಿಸಿದರು.ಈ ಅಭಿಯಾನವನ್ನು ಯಶಸ್ವಿಗೊಳಿಸಲು ನಗರ ಜಿಲ್ಲೆಯಾದ್ಯಂತ 184 ವ್ಯಾಕ್ಸಿನೇಟರ್ ಗಳನ್ನು ಗುರುತಿಸಲಾಗಿದ್ದು ಪಶು ವೈದ್ಯರು, ವೆಟರ್ನರಿ ನಿರೀಕ್ಷಕರು, ಜಾನುವಾರು ಅಧಿಕಾರಿಗಳು, ಮೈತ್ರಿ ಕೆಲಸಗಾರರು ಹಾಗೂ ಪಶು ಸಖಿಯರು ಒಂದು ತಂಡವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಹರಿಯಾಣ ರಾಜ್ಯವನ್ನು ಹೊರತುಪಡಿಸಿದರೆ ಕರ್ನಾಟಕ ರಾಜ್ಯವು ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಅನುಷ್ಠಾನಗೊಳಿಸುವಲ್ಲಿ ಉತ್ತಮ ಸ್ಥಾನದಲ್ಲಿದೆ ಎಂದು ತಿಳಿಸಿದ ಡಾ. ಚಂದ್ರಶೇಖರ್ 2030 ರಷ್ಟರಲ್ಲಿ ಸಂಪೂರ್ಣವಾಗಿ ಈ ರೋಗವನ್ನು ದೇಶದಿಂದ ನಿರ್ಮೂಲನೆ ಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದವರು ತಿಳಿಸಿದರು.
ಸಭೆಯಲ್ಲಿ ಬೆಂಗಳೂರು ನಗರ ಅಪರ ಜಿಲ್ಲಾಧಿಕಾರಿಗಳಾದ ಜಗದೀಶ್ ನಾಯಕ್, ಪ್ರೊಫೆಸರ್ ಬಿ ಎಂ ವೀರೇಗೌಡ, ಡಾಕ್ಟರ್ ಧರಣೇಶ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ನಿರ್ದೇಶಕರಾದ ಡಾ. ಚಂದ್ರಯ್ಯ, ಬೆಂಗಳೂರುನಗರ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಪಶುಪಾಲನ ಇಲಾಖೆಯಸಹಾಯಕ ನಿರ್ದೇಶಕರು, ಲಸಿಕಾ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಯಾದ ಮೀನಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿದಂತೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.