ಬೆಂಗಳೂರು: ಕಾಲುವೆಗಳಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ನೀರಾವರಿ ಇಲಾಖೆ ಅಧಿಕಾರಿಗಳ ಜೊತೆಗೆ ಪಂಪ್ ಸೆಟ್ಗಳಿಗೆ ವಿದ್ಯುತ್ ಪೂರೈಸುವ ಇಂಧನ ಇಲಾಖೆ ಅಧಿಕಾರಿಗಳನ್ನು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಹೇಳಿದರು.
ಕರ್ನಾಟಕ ನೀರಾವರಿ (ತಿದ್ದುಪಡಿ) ಕಾಯ್ದೆ– 2024’ರ ಕುರಿತು ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರ್ಗಳಿಗೆ ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಮೇಲೆ ರಾಜಕೀಯ ಒತ್ತಡಗಳಿವೆ ಎಂದು ನನಗೆ ತಿಳಿದಿದೆ. ಹೀಗಾಗಿ, ಈ ತಿದ್ದುಪಡಿಯ ಸಾಧಕ ಬಾಧಕಗಳನ್ನು ಈ ಕಾರ್ಯಾಗಾರದಲ್ಲಿ ಚರ್ಚೆ ಮಾಡಿ ಎಂದು ಹೇಳಿದರು.
ಶಾಸಕರು ಹೇಳಿದರು ಎಂಬ ಕಾರಣಕ್ಕೆ ಯೋಜನೆಗಳನ್ನು ಬರೆದು ಕೊಡುತ್ತಿದ್ದೀರಿ. ರೂ.5 ಕೋಟಿವರೆಗೂ ಯೋಜನೆಗಳಿಗೆ ನೀವೇ ಅನುಮತಿ ನೀಡಬಹುದು ಎಂಬ ಕಾರಣಕ್ಕೆ ರೂ.4.99 ಕೋಟಿಯ ಅಂದಾಜು ಬರೆದು ಕೊಡುತ್ತಿದ್ದೀರಿ. ಈ ರೀತಿ ಮಾಡಲು ಹೇಳಿದವರು ಯಾರು? ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ರಾಜಕೀಯ ಒತ್ತಡದಿಂದ ಎಂಜಿನಿಯರ್ಗಳು 5 ಕೋಟಿ ರೂ.ಗಳ ಅಡಿಯಲ್ಲಿ ಯೋಜನೆಗಳನ್ನು ಮಂಜೂರು ಮಾಡುತ್ತಿದ್ದರು. ಬಜೆಟ್ನಲ್ಲಿ ಶಿಸ್ತು ಇರಬೇಕು. ನಾಳೆ ಏನಾದರೂ ತಪ್ಪಾದಲ್ಲಿ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಬೇರೆಯವರನ್ನು ಮೆಚ್ಚಿಸಲು ಕೆಲಸ ಮಾಡಬೇಡಿ. ನಿಮ್ಮ ಆತ್ಮಸಾಕ್ಷಿ ಮೆಚ್ಚಿಸಲು ಕೆಲಸ ಮಾಡಿ. ಈಗಾಗಲೇ ಆರಂಭಿಸಿದ ಯೋಜನೆಗಳನ್ನು ಪೂರ್ಣಗೊಳಿಸಬೇಕಿದೆ. ಕೆಲವೇ ದಿನಗಳಲ್ಲಿ ಮಂಡಳಿ ಸಭೆ ಇದ್ದು, ರೂ.1 ಲಕ್ಷ ಕೋಟಿಯಷ್ಟು ಯೋಜನೆಗಳಿಗೆ ಮನವಿ ಇದೆ. ಇಲಾಖೆಯಲ್ಲಿ ಇರುವುದೇ ರೂ.16 ಸಾವಿರ ಕೋಟಿ, ಅದರಲ್ಲೂ ಹಳೇ ಯೋಜನೆಯ ಕಾಮಗಾರಿಗಳಿವೆ. ಈ ಪರಿಸ್ಥಿತಿಯಲ್ಲಿ ನಾನು ಯಾರಿಗೆ ಸಹಾಯ ಮಾಡಬೇಕು? ಈ ವಿಚಾರದಲ್ಲಿ ನೀವು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಈ ತಿದ್ದುಪಡಿ ಬಂದಿದೆ ಎಂದು ಏಕಾಏಕಿ ನೀವು ನುಗ್ಗಬೇಡಿ. ಕಾನೂನು ಇದೆ ಎಂದು ರೈತರಿಗೆ ಕಿರುಕುಳ ನೀಡಬೇಡಿ. ಹಂತ-ಹಂತವಾಗಿ ಜಾರಿಗೊಳಿಸಿ. ಅಕ್ರಮವಾಗಿ ಕಾಲುವೆಗಳಲ್ಲಿ ಮೋಟರ್ ಇಟ್ಟಿರುವ ರೈತರಿಗೆ ತಮ್ಮ ತಪ್ಪಿನ ಬಗ್ಗೆ ಈಗಿನಿಂದಲೇ ತಿಳಿಸಿ. ನೀರು ಬಳಕೆದಾರರ ಸಹಕಾರ ಸಂಘದ ಮೂಲಕ ಈ ಜಾಗೃತಿ ಮೂಡಿಸಿ. ಈ ವಿಚಾರದಲ್ಲಿ ನಿಮಗೆ ಇನ್ನಷ್ಟು ಸಶಕ್ತೀಕರಣ ಅಗತ್ಯವಿದ್ದಲ್ಲಿ, ಅದನ್ನು ಚರ್ಚಿಸಿ ಸಲಹೆ ನೀಡಿ. ಈ ವಿಚಾರದಲ್ಲಿ ರೈತರ ಸಹಕಾರ ಬಹಳ ಮುಖ್ಯ ಎಂದು ತಿಳಿಸಿದರು.
ಕರ್ನಾಟಕ ನೀರಾವರಿ (ತಿದ್ದುಪಡಿ) ಅಧಿನಿಯಮ 2024ರಲ್ಲಿ ಬಹಳ ಮಹತ್ತರ ತಿದ್ದುಪಡಿ ತರಲಾಗಿದೆ. ಈ ಕುರಿತು ಇನ್ನಷ್ಟು ಚರ್ಚೆ ನಡೆಯಲಿದ್ದು, ಜನರನ್ನು ಎತ್ತಿಕಟ್ಟುವ ಪ್ರಯತ್ನ ನಡೆಯಲಿದೆ. ರೈತರನ್ನು ಉಳಿಸುವುದು ನಮ್ಮ ಉದ್ದೇಶ. ಒಬ್ಬರಿಗೆ ಒಂದು ಕಾನೂನು ಮತ್ತೊಬ್ಬರಿಗೆ ಬೇರೆ ಕಾನೂನು ಮಾಡಲು ಸಾಧ್ಯವಿಲ್ಲ. ಈ ತಿದ್ದುಪಡಿ ಮೂಲಕ ಉಪ ಆಯುಕ್ತರ ಅಧಿಕಾರವನ್ನು ಸೂಪರಿಂಟೆಂಡೆಂಟ್ ಇಂಜಿನಿಯರ್ಗೆ ನೀಡಿದ್ದೇವೆ. ಈ ವಿಚಾರವನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಎತ್ತಿನಹೊಳೆ ಯೋಜನೆಗೆ ನಾವು 25 ಸಾವಿರ ಕೋಟಿ ವೆಚ್ಚ ಮಾಡಿದ್ದೇವೆ. ಇಷ್ಟು ಹಣ ಖರ್ಚು ಮಾಡಿ ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ಒದಗಿಸದಿದ್ದರೆ ಹೇಗೆ? ಈ ಯೋಜನೆಯಲ್ಲಿ 3 ತಿಂಗಳಲ್ಲಿ ಸಿಗುವ ನೀರು ಕೇವಲ 24 ಟಿಎಂಸಿಯಷ್ಟು ಮಾತ್ರ. ಮುಂದಿನ ದಿನಗಳಲ್ಲಿ ಇದಕ್ಕೆ ಬೇರೆ ಯೋಜನೆ ಹಾಕಿ ವ್ಯರ್ಥವಾಗಿ ಹರಿಯುತ್ತಿರುವ ನೀರನ್ನು ಬಳಸಿಕೊಳ್ಳುವ ಉದ್ದೇಶ ಹೊಂದಿದ್ದೇವೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಜನರಿಗೆ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಅರಿವಿದೆ. ಕಾರಣ ಈ ಭಾಗದಲ್ಲಿ 2 ಸಾವಿರ ಅಡಿ ಕೊಳವೆ ಬಾವಿ ಕೊರೆಸಿ ನೀರು ತೆಗೆದು ತರಕಾರಿ, ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ನೀರು ಹೆಚ್ಚಾಗಿ ಸಿಗುತ್ತಿರುವ ಭಾಗಗಳ ಜನರಿಗೆ ನೀರಿನ ಬಳಕೆ ಬಗ್ಗೆ ಹೆಚ್ಚು ಅರಿವಿಲ್ಲ. ಹೀಗಾಗಿ, ಈ ತಿದ್ದುಪಡಿ ತರಲಾಗಿದೆ ಎಂದರು.