ಭುವನೇಶ್ವರ: ಅತ್ತ ಕೇರಳದ ದೇಗುಲ ಉತ್ಸವದ ವೇಳೆ ತರಬೇತಿ ಪಡೆದಿದ್ದ ಆನೆ ರಂಪಾಚ ವಿಚಾರ ಹಸಿರಾಗಿರುವಂತೆಯೇ ಇತ್ತ ಒಡಿಶಾದಲ್ಲೂ ಅಂತಹುದೇ ಘಟನೆಯೊಂದು ವರದಿಯಾಗಿದೆ.
ಹೌದು.. ಒಡಿಶಾದ ಪುರಿ ಜಿಲ್ಲೆಯ ಕನಾಸ್ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಕಾಡಾನೆಯೊಂದು ಸ್ಥಳೀಯ ಕಾಲೇಜೊಂದರ ಆವರಣಕ್ಕೆ ನುಗ್ಗಿ ಆತಂಕ ಸೃಷ್ಟಿಸಿತ್ತು. ಆಹಾರ ಅರಸುತ್ತಾ ಬಂದಿದ್ದ ಆನೆ ಕಾಲೇಜು ಆವರಣ ಪ್ರವೇಶಿಸಿ ಸಿಕ್ಕ ಸಿಕ್ಕ ಕಡೆ ಓಡಾಡಿತ್ತು. ಇದರಿಂದ ಗಾಬರಿಯಾದ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ಓಡಿದ್ದಾರೆ.
ಆನೆ ಆಗಮನದ ಹಿನ್ನಲೆಯಲ್ಲಿ ಕಾಲೇಜು ಸ್ಥಗಿತವಾಯಿತು. ಪ್ರಾಧ್ಯಾಪಕರು ವಿದ್ಯಾರ್ಥಿಗಳ ಸುರಕ್ಷತೆಯ ಹಿನ್ನಲೆಯಲ್ಲಿ ತರಗತಿಗಳನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ತೆರಳುವಂತೆ ಸೂಚಿಸಿದರು. ಆದರೆ ಕಾಲೇಜಿನ ಆವರಣದಲ್ಲೇ ಆನೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಕಾಲೇಜು ಕಟ್ಟಡ ತೊರೆಯಲು ಹಿಂಜರಿದರು.
ಬಳಿಕ ಕಾಲೇಜು ಸಿಬ್ಬಂದಿ ಒಡಿಶಾ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಆನೆಯನ್ನು ಕಾಲೇಜು ಆವರಣದಿಂದ ಹೊರಕ್ಕೆ ಓಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಒಡಿಶಾದಲ್ಲಿ ಆನೆ ಹಾವಳಿ ಇದೇ ಮೊದಲೇನಲ್ಲ.. ಇತ್ತೀಚೆಗಷ್ಟೇ ಅಂದರೆ ಜನವರಿ 4ರಂದು ಒಡಿಶಾದ ಮಯೂರಭಂಜ್ ಜಿಲ್ಲೆಯ ದದ್ದೂರ್ ಗ್ರಾಮದಲ್ಲಿ 45 ವರ್ಷದ ವ್ಯಕ್ತಿಯೊಬ್ಬರು ಆನೆಯ ದಾಳಿಯಿಂದ ಮೃತಪಟ್ಟಿದ್ದರು. ಮೃತ ವ್ಯಕ್ತಿಯನ್ನು ಮಧುಸೂದನ್ ಪಾಂಡೇ ಎಂದು ಗುರುತಿಸಲಾಗಿದ್ದು, ಈತ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ.