ಹೈದರಾಬಾದ್: ಡಿಸೆಂಬರ್ 4 ರಂದು ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಹೈದರಾಬಾದ್ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಕೇಂದ್ರ ವಲಯ ಡಿಸಿಪಿ ಅಕ್ಷಾಂಶ್ ಯಾದವ್ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಅಲ್ಲು ಅರ್ಜುನ್ ಅವರ ವಿಚಾರಣೆ ನಡೆಸಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಲ್ಲು ಅರ್ಜುನ್ ಅವರು ತಮ್ಮ ತಂದೆ ಅಲ್ಲು ಅರವಿಂದ್ ಮತ್ತು ಮಾವ ಕಂಚಾರ್ಲ ಚಂದ್ರಶೇಖರ್ ರೆಡ್ಡಿ ಅವರೊಂದಿಗೆ ಪೊಲೀಸ್ ಠಾಣೆಯಿಂದ ಹೊರಟರು.
ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು 11ನೇ ಆರೋಪಿಯನ್ನಾಗಿ ಮಾಡಲಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್ ಪೊಲೀಸರು ಸೋಮವಾರ ಸಮನ್ಸ್ ನೀಡಿದ್ದರು. ಅದರಂತೆ ಅಲ್ಲು ಅರ್ಜುನ್ ಇಂದು ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಬೆಳಿಗ್ಗೆ 10.30ರ ಸುಮಾರಿಗೆ ಅಲ್ಲು ಅರ್ಜುನ್ ತಮ್ಮ ನಿವಾಸದಿಂದ ಹೊರಟು ಪೊಲೀಸ್ ಠಾಣೆಗೆ ತೆರಳಿದರು. ಅಲ್ಲು ಅರ್ಜುನ್ ಅವರ ವಕೀಲ ಅಶೋಕ್ ರೆಡ್ಡಿ ಸಮ್ಮುಖದಲ್ಲಿಯೇ ಪೊಲೀಸರು ನಟನನ್ನು ವಿಚಾರಣೆಗೊಳಪಡಿಸಿದ್ದಾರೆ.
ಪೊಲೀಸರು ಕೇಳಿದ ಕೆಲ ಪ್ರಶ್ನೆಗಳು ಇವು
ಪ್ರೀಮಿಯರ್ ಶೋಗೆ ಬರಲು ಪೊಲೀಸರು ಅನುಮತಿ ನಿರಾಕರಿಸಿದ್ದರು ಎಂಬುದು ನಿಮಗೆ ತಿಳಿದಿದೆಯೇ?, ಪೋಲೀಸರ ಅನುಮತಿ ನಿರಾಕರಣೆ ಹೊರತಾಗಿಯೂ ಚಿತ್ರಮಂದಿರಕ್ಕೆ ನೀವು ಹಾಜರಾಗಬೇಕು ಎನ್ನುವ ನಿರ್ಧಾರ ಯಾರದ್ದು? ಚಿತ್ರಮಂದಿರದ ಹೊರಗೆ ಸಂಭವಿಸಿದ ಕಾಲ್ತುಳಿತದ ಬಗ್ಗೆ ಯಾವುದೇ ಪೊಲೀಸ್ ಅಧಿಕಾರಿ ನಿಮಗೆ ಮಾಹಿತಿ ನೀಡಿದ್ದಾರೆಯೇ?ಕಾಲ್ತುಳಿತದಲ್ಲಿ ಮಹಿಳೆ ಸಾವಿಗೀಡಾಗಿರುವ ಕುರಿತು ನಿಮಗೆ ಯಾವಾಗ ಮಾಹಿತಿ ತಿಳಿಯಿತು?
‘ನೀವು (ಅಲ್ಲು ಅರ್ಜುನ್) ತನಿಖೆಗೆ ಸಹಕರಿಸಬೇಕು’ ಎಂದು ಪೊಲೀಸರು ನೋಟಿಸ್ ಮೂಲಕ ತಿಳಿಸಿದ್ದರು. ‘ಪ್ರಕರಣವು ತನಿಖೆಯಲ್ಲಿದೆ ಮತ್ತು ಘಟನೆಯ ಬಗ್ಗೆ ನಿಮ್ಮಿಂದ ಉತ್ತರಗಳನ್ನು ಪಡೆಯಲು ಮತ್ತು ಅಗತ್ಯವಿದ್ದಲ್ಲಿ, ಅಪರಾಧದ ಸ್ಥಳಕ್ಕೆ ಭೇಟಿ ನೀಡಲು, ಕೆಳಗೆ ಸಹಿ ಮಾಡಿದ ಅಧಿಕಾರಿಯ ಮುಂದೆ ನಿಮ್ಮ ಉಪಸ್ಥಿತಿಯು ತುಂಬಾ ಅವಶ್ಯಕವಾಗಿದೆ’ ಎಂದು ನೋಟಿಸ್ನಲ್ಲಿ ಹೇಳಲಾಗಿತ್ತು.
ಡಿಸೆಂಬರ್ 4 ರಂದು ಹೈದರಾಬಾದ್ನ ಸಂಧ್ಯಾ ಚಿತ್ರಮಂದಿರದಲ್ಲಿ ಉಂಟಾದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವಿಗೀಡಾಗಿದ್ದರು ಮತ್ತು ಅವರ ಎಂಟು ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆ ನಂತರ, ಮೃತ ಮಹಿಳೆಯ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಚಿತ್ರಮಂದಿರದ ಆಡಳಿತದ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13 ರಂದು ಪೊಲೀಸರು ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ತೆಲಂಗಾಣ ಹೈಕೋರ್ಟ್ ಅದೇ ದಿನ ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತು ಮತ್ತು ಡಿಸೆಂಬರ್ 14 ರಂದು ಬೆಳಿಗ್ಗೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.