ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರಿನಲ್ಲಿ ವಿಶೇಷ, ವಿಭಿನ್ನ ರೀತಿಯಲ್ಲಿ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ಆರೂಢ ಭಾರತಿ ಸ್ವಾಮಿಗಳು ವಹಿಸಿಕೊಂಡಿದ್ದರು. ಅಧ್ಯಕ್ಷತೆ ಟಿ. ಸತೀಶ್ ಜವರೇಗೌಡ, ಸಮಾರೋಪ ನುಡಿಯ ಅತಿಥಿಯಾಗಿ ಮಂಜುಳಾ ಪಾವಗಡ ಹಾಗೂ ವಿಶೇಷ ಅತಿಥಿಯಾಗಿ ಹಿರಿಯ ನಟಿ ಮೈಸೂರು ಮಾಲತಿಯವರು ಆಗಮಿಸಿದ್ದರು.
ಕಾವ್ಯಶ್ರೀ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ. ಶಿವಣ್ಣ ರಾಜ್ಯದ ಹಲವಾರು ಮಹಾನ್ ಸಾಧಕರನ್ನು ಗುರುತಿಸಿ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕವಿಗೋಷ್ಠಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚನ ಮಾಡಿದರು. ಪುಟ್ಟ ಮಕ್ಕಳಿಂದ ಹಿಡಿದು ಹಿರಿ ವಯಸ್ಸಿನವರಿಗೂ ವೇದಿಕೆ ಕಲ್ಪಿಸಿಕೊಟ್ಟ ಕೀರ್ತಿ ಶಿವಣ್ಣರವರಿಗೆ ಸಲ್ಲುತ್ತದೆ. ಪುಟಾಣಿ ಮಕ್ಕಳ ನೃತ್ಯ, ಭಾಷಣ, ಹಾಡು ಜೊತೆಗೆ ನಾಟಕ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಗೆ ಮತ್ತಷ್ಟು ಮೆರುಗು ನೀಡಿದ್ದು ಸತ್ಯ. ಕಾವ್ಯಶ್ರೀ ಸಂಸ್ಥೆ ವರುಷದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿಕೊಂಡು ಹೋಗಲಿ ಎಂದು ಮಂಜುಳಾ ಪಾವಗಡರವರು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಸಂಗಮನಾಥ ಪಿ. ಸಜ್ಜನ ರವರ ಜೇನುಗೂಡು ಮಕ್ಕಳ ಕವನ ಸಂಕಲನ ಲೋಕಾರ್ಪಣೆಯಾಗಿದ್ದು ವಿಶೇಷವಾಗಿತ್ತು. ಕಾವ್ಯಶ್ರೀ ಸಂಸ್ಥೆಯ ಬೆನ್ನೆಲುಬಾಗಿ ಸೇವೆ ಸಲ್ಲಿಸಿತ್ತಿರುವ ಚೇತನ ಫೌಂಡೇಶನ್ ಚಂದ್ರಶೇಖರ ಮಾಡಲಗೇರಿ, ಹಾಗೂ ಪದಾಧಿಕಾರಿಗಳಿಗೆ ಶಿವಣ್ಣ ಧನ್ಯವಾದಗಳನ್ನು ತಿಳಿಸಿದರು.ಪತ್ರಕರ್ತರು, ಚಲನಚಿತ್ರ ನಿರ್ದೇಶಕರಾದ ರಮೇಶ್ ಸುರ್ವೆ ಪುಸ್ತಕ ಲೋಕಾರ್ಪಣೆ ಮಾಡಿದರು. ಹಿರಿಯ ಸಾಹಿತಿ ರಮೇಶ್ ಕೋರಕೊಪ್ಪ ರವರು ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ, ಅಚ್ಚುಕಟ್ಟಾಗಿ ಗೋಷ್ಠಿ ನಡೆಸಿಕೊಟ್ಟರು. ಸಾಹಿತಿಗಳಾದ ರಾಮಲಿಂಗೇಶ್ವರ ಶಿಸಿರಾ, ಶ್ವೇತ ಪ್ರಕಾಶ್, ನಟಿ ಸುಪ್ರಿಯಾ ನಿಪ್ಪಾಣಿ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.