ತಿ.ನರಸೀಪುರ: ಕಾವೇರಿ, ಕಪಿಲ, ಸ್ಪಟಿಕ ಸರೋವರ ತ್ರಿವೇಣಿ ಸಂಗಮ ಕ್ಷೇತ್ರ ಎಂದೇ ಪ್ರಖ್ಯಾತಿ ಹೊಂದಿರುವ ತಿರುಮಕೂಡಲು ಕ್ಷೇತ್ರದಲ್ಲಿ ಫೆ.10 ಸೋಮವಾರದಿಂದ ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿರುವ ಹಿನ್ನೆಲೆಯಲ್ಲಿ ಆದಿ ಚುಂಚನಗಿರಿ ಶ್ರೀಕ್ಷೇತ್ರದ ಶ್ರೀ ನಿರ್ಮಲಾನಂದ ಸ್ವಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.
ಪಟ್ಟಣದ ಆದಿಚುಂಚನಗಿರಿ ರಜತೋತ್ಸವ ಕಲ್ಯಾಣ ಮಂಟಪದಲ್ಲಿ ಆದಿಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಉಪವಿಭಾಗಾಧಿಕಾರಿ ರಕ್ಷಿತ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ,ತಿರುಚ್ಚಿ ಬುದ್ಧ ಸ್ವಾಮೀಜಿ ಹಾಗು ಟಿ ನರಸೀಪುರದ ದೊರೆಸ್ವಾಮಿ ಸ್ವಾಮೀಜಿ ಗಳೊಂದಿಗೆ 13ನೇ ಕುಂಭಮೇಳದ ಸಿದ್ಧತೆ ಬಗ್ಗೆ ಮಾಹಿತಿ ಪಡೆದು ಶ್ರೀಗಳು ನಂತರ ತೆಪ್ಪದಲ್ಲಿ ಸಂಗಮಕ್ಕೆ ತೆರಳಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿ ಆಗಬೇಕಾದ ಕೆಲ ಮಾರ್ಪಾಡುಗಳ ಬಗ್ಗೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ವೇಳೆ ಶ್ರೀಗಳಿಗೆ ಸಿದ್ಧತಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಉಪ ವಿಭಾಗಾಧಿಕಾರಿ ರಕ್ಷಿತ್ ನದಿಯಲ್ಲಿ ಮರಳು ಪ್ರಮಾಣ ಇಲ್ಲದಿರುವ ಕಾರಣ ನದಿ ಮದ್ಯೆ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ಅಗಸ್ತೇಶ್ವರ ಸ್ವಾಮಿ ದೇವಸ್ಥಾನ ಹಾಗು ಆಸು ಪಾಸಿನಲ್ಲಿ ನಡೆಸಲಾಗುತ್ತಿದೆ, ಶ್ರೀ ಗುಂಜಾ ನರಸಿಂಹಸ್ವಾಮಿ ದೇವಸ್ಥಾನ ಹಾಗು ಆದಿ ಚುಂಚನಗಿರಿ ಸಮುದಾಯ ಭವನದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಎರಡು ವೇದಿಕೆಗಳನ್ನು ನಿರ್ಮಿಸಲಾಗಿದೆ,ತ್ರಿವೇಣಿ ಸಂಗಮದ ನದಿ ತಟದಲ್ಲಿ ಸ್ವಾಮೀಜಿಗಳು ತಂಗಲು ಕುಟೀರ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಭಕ್ತಾಧಿಗಳು ಆತಂಕವಿಲ್ಲದೇ ಪುಣ್ಯ ಸ್ನಾನ ಮಾಡಲು ನದಿಯ ಒಳಗೆ ಗುರುತಿಸಲಾದ ಸ್ಥಳದಲ್ಲಿ ಬ್ಯಾರಿಕೆಡ್ ಗಳನ್ನು ಅಳವಡಿಸಿ ಸುಗಮವಾಗಿ ಅನುವು ಮಾಡಿಕೊಡಲಾಗಿದೆ
ಸಾಧು ಸಂತರು ಮಠಾಧೀಶರಿಗೆ ನಡುಹೊಳೆ ಬಸಪ್ಪನ ಬಳಿ ಸ್ನಾನ ಮಾಡಲು ಅವಕಾಶ ಮಾಡಿಕೊಡಲಾಗಿದ್ದು ಅವರಿಗೆ ಬಟ್ಟೆ ಬದಲಿಸಲು ನದಿ ಮದ್ಯೆ ವ್ಯವಸ್ಥೆ ಮಾಡಲಾಗಿದೆ,ಗಣ್ಯರು ಮತ್ತು ಅತಿ ಗಣ್ಯರಿಗೆ ಸ್ನಾನಕ್ಕೆ ಪ್ರತ್ಯೇಕ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಸಭೆಗೆ ವಿಶಾಲವಾದ ವೇದಿಕೆ…! ತಿರುಮಕೂಡಲಿನ ಚೌಡಯ್ಯ ಸರ್ಕಲ್ ಹಾಗು ಚೌಡೇಶ್ವರಿ ದೇವಸ್ಥಾನದ ಅನತಿ ದೂರದಲ್ಲಿ ಧಾರ್ಮಿಕ ಸಭೆ ನಡೆಸಲು ವೇದಿಕೆ ನಿರ್ಮಿಸಲಾಗಿದೆ, ಸುಮಾರು 5 ರಿಂದ 8 ಸಾವಿರ ಮಂದಿ ಕೂತು ಧಾರ್ಮಿಕ ಸಭೆ ವೀಕ್ಷಿಸಬಹುದಾದಂತಹ ವಿಶಾಲವಾದ ವೇದಿಕೆ ನಿರ್ಮಿಸಲಾಗಿದೆ.ತ್ರಿವೇಣಿ ಸಂಗಮಕ್ಕೆ ಏಕ ಮುಖ ಸಂಚಾರ…! ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ತೆರಲುವ ಭಕ್ತಾಧಿಗಳಿಗೆ ಈ ಬಾರಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.ತಿರುಮಕೂಡಲಿನ ಚೌಡಯ್ಯ ಸರ್ಕಲ್ ನಿಂದಲೇ ಇದು ಅನ್ವಯವಾಗಲಿದ್ದು, ಅಲ್ಲಿಂದ ಯಾವುದೇ ವಾಹನಗಳ ಓಡಾಟ ನಿಷೇಧ ಮಾಡಲಾಗಿದೆ.ಸರ್ಕಲ್ ನಿಂದ ನಡೆದೇ ತ್ರಿವೇಣಿ ಸಂಗಮ ತಲುಪಬೇಕಿದೆ.
ಸ್ನಾನ ಮುಗಿಸಿ ಅಲ್ಲಿಂದ ಅಗಸ್ತೇಶ್ವರ ಸ್ವಾಮಿ ದೇವಸ್ಥಾನದ ಮೂಲಕ ಆದಿ ಚುಂಚನಗಿರಿ ಕಲ್ಯಾಣ ಮಂಟಪದ ಹಿಂಭಾಗದಿಂದ ತೆರಳಿ ಧಾರ್ಮಿಕ ಸಭೆ ಜಾಗಕ್ಕೆ ತಲುಪಲು ವ್ಯವಸ್ಥೆ ಮಾಡಲಾಗಿದೆ.ನಂಜನಗೂಡು, ಬನ್ನೂರು,ತಲಕಾಡು ಹಾಗು ಕೊಳ್ಳೇಗಾಲದಿಂದ ಬರುವ ವಾಹನಗಳಿಗೆ ಪಟ್ಟಣದ ಮುಖ್ಯ ದ್ವಾರದಲ್ಲೇ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.ವಿಶೇಷ ಚೇತನರು ಹಾಗು ವಯೋವೃದ್ಧರಿಗೆ ತ್ರಿವೇಣಿ ಸಂಗಮಕ್ಕೆ ತೆರಳಲು ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಸಂದರ್ಭ ತಹಸೀಲ್ದಾರ್ ಸುರೇಶ್ ಚಾರ್, ಸಬ್ ಇನ್ಸ್ಪೆಕ್ಟರ್ ಜಗದೀಶ್ ಧೂಳಶೆಟ್ಟಿ, ಸೇರಿದಂತೆ ಸ್ಥಳೀಯ ಮುಖಂಡರುಗಳು ಇದ್ದರು.