ಬೆಂಗಳೂರು: ಕಾಂಗ್ರೆಸ್ ವರಿಷ್ಠರಿಗೆ ಸಂದೇಶ ರವಾನಿಸಿ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ನಡೆಸುತ್ತಿದ್ದಾರೆಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಶನಿವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಲಾಭಕ್ಕಾಗಿ ಸಿಎಂ ಸಮಾವೇಶ ನಡೆಸುತ್ತಿದ್ದಾರೆ, ತಮ್ಮ ಸ್ಥಾನವನ್ನು ಬಲಪಡಿಸಲು ತಮ್ಮದೇ ಪಕ್ಷಕ್ಕೆ ಸಂದೇಶ ರವಾನಿಸಲು ಹೊರಟಿದ್ದಾರೆ. ರಾಷ್ಟ್ರೀಯ ನಾಯಕರ ಗಮನ ಸೆಳೆಯುವ ಉದ್ದೇಶದಿಂದ ರ್ಯಾಲಿ ನಡೆಸುತ್ತಿದ್ದು, ಈ ಸಮಾವೇಶ ಅವರ ಶಕ್ತಿ ಪ್ರದರ್ಶನವಾಗಿದೆ. ನಮ್ಮ ದೃಷ್ಟಿಯಲ್ಲಿ ಈ ರ್ಯಾಲಿ ಕಾಂಗ್ರೆಸ್ ಹೈಕಮಾಂಡ್ಗೆ ಸಂದೇಶ ರವಾನಿಸುವ ಸಲುವಾಗಿಯೇ ಹೊರತು ಜೆಡಿಎಸ್ ಅಥವಾ ಬಿಜೆಪಿ ಪಕ್ಷಗಳಿಗಲ್ಲ ಎಂದು ಹೇಳಿದರು.
ಇದೇ ವೇಳೆ ಹಾಸನದಲ್ಲಿ ನಡೆಯಲಿರುವ ಈ ಸ್ವಾಭಿಮಾನಿ ಸಮಾವೇಶ ಜೆಡಿಎಸ್ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸಮಾವೇಶ ಯಾರು ಎಲ್ಲಿ ಬೇಕಾದರು ಮಾಡಬಹುದು ಇದರಿಂದ ಹಿನ್ನಡೆ ಆಗುವ ಪ್ರಶ್ನೆ ಇಲ್ಲ. ರಾಜ್ಯದಲ್ಲಿ ಚುನಾವಣೆಗೆ ಮೂರುವರೆ ವರ್ಷ ಬಾಕಿ ಇದೆ. ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಸರ್ಕಾರದ ಸಾಧನೆಗಳನ್ನು ಜನರು ಪ್ರಶ್ನಿಸುತ್ತಿದ್ದಾರೆ. ಆಡಳಿತವು ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಮುಳುಗಿದೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಬ್ಬರು ಕೂಡ ಕ್ಷೇತ್ರಗಳಿಗೆ ಹಣದ ಕೊರತೆಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ಕೆಲವು ಗ್ಯಾರಂಟಿ ಯೋಜನೆಗಳನ್ನು ಕೈಬಿಡಬೇಕೆಂದು ಮನವಿ ಮಾಡಿಕೊಂಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ವರ್ಷವಾಗಿದೆ… ಅವರದೇ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು ಹೇಳಿಕೆ ಕೊಡುತ್ತಿದ್ದಂತೆಯೇ ಕೆಂಡಾಮಂಡಲಗೊಂಡ ರಾಜ್ಯ ನಾಯಕರು ಸಂಜೆಯ ಒಳಗೆ ಯೂಟರ್ನ್ ಹೊಡೆಯುವಂತೆ ಮಾಡಿದ್ದರು. ಕಾಂಗ್ರೆಸ್ ಶಾಸಕರ ಪರಿಸ್ಥಿತಿಯೇ ಹೀಗಿದ್ದಾಗ ಜೆಡಿಎಸ್-ಬಿಜೆಪಿ ಶಾಸಕರ ಪರಿಸ್ಥಿತಿ ಏನಾಗಬೇಕು? ಒಂದು ರೂಪಾಯಿ ಅನುದಾನ ಬಿಡುಗಡೆ ಆಗಿಲ್ಲ. ನಯಾ ಪೈಸೆ ಇವತ್ತು ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಕೊಡುತ್ತಿಲ್ಲ ಇಲ್ಲ. ಈ ಪರಿಸ್ಥಿತಿ ಇವತ್ತು ರಾಜ್ಯದಲ್ಲಿ ಇದೆ ಎಂದು ಕಿಡಿಕಾರಿದರು.
ಬಳಿಕ ಯೋಗೇಶ್ವರ್ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಅತಿ ಹೆಚ್ಚು ಪ್ಯಾಕೇಜ್ ಎಲ್ಲಿ ಸಿಗುತ್ತದೆ ಎಂದು ಕಾಂಗ್ರೆಸ್ ಗೆ ಹೋಗಿದ್ದಾರೆ. ಎಷ್ಟು ದಿನ ಕಾಂಗ್ರೆಸ್ ನಲ್ಲಿ ಉಳಿಯುತ್ತಾರೆ ಅನ್ನೋದು ಪ್ರಶ್ನೆ. ಅವರನ್ನ ನಂಬಿಕೊಂಡು ನಮ್ಮ ಶಾಸಕರು ಕಾಂಗ್ರೆಸ್ ಗೆ ಹೋಗುವ ಪರಿಸ್ಥಿತಿ ಇಲ್ಲ ಎಂದು ಕಿಡಿಕಾರಿದರು.
ನಮ್ಮ ಪಕ್ಷದ ಶಾಸಕರು ರಾಜಕೀಯ ಹೊರತುಪಡಿಸಿ ಭಾವನಾತ್ಮಕವಾದ ರಕ್ತಗತ ಸಂಪರ್ಕ ಹೊಂದುಕೊಂಡಿದ್ದಾರೆ. ನನ್ನ ಜೊತೆ ನಮ್ಮ ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ ಕ್ಷೇತ್ರದ ಅನುದಾನ ಸಮಸ್ಯೆ ಬಗ್ಗೆಯೂ ಚರ್ಚೆ ಮಾಡುತ್ತಿದ್ದಾರೆ. ನಮ್ಮ ಯಾವುದೇ ಶಾಸಕರು ಅಸಮಾಧಾನಿತರು ಇಲ್ಲ. ಅಸಮಾಧಾನಿತರು ಕಾಂಗ್ರೆಸ್ ನಲ್ಲಿ ಹೆಚ್ಚಾಗಿದ್ದಾರೆ. ಕಾಂಗ್ರೆಸ್ ನಲ್ಲಿಯೇ ಆ ಪರಿಸ್ಥಿತಿ ಇದೆ. 139 ಶಾಸಕರನ್ನ ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳುವ ಕೆಲಸ ಮಾಡಲಿ ಎಂದರು.
ಒಕ್ಕಲಿಗ ಸ್ವಾಮೀಜಿ ವಿರುದ್ಧ ಎಫ್ಐಆರ್, ನೋಟಿಸ್ ವಿಚಾರ ಕುರಿತು ಮಾತನಾಡಿ, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ಒಂದು ಸಮುದಾಯ ಓಲೈಕೆ ಮಾಡುವುದಕ್ಕೆ ಮತ್ತೊಂದು ಸಮುದಾಯವನ್ನು ಗುರಿ ಮಾಡುತ್ತಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನತೆ ಹೇಗೆ ಉತ್ತರ ಕೊಡುತ್ತಾರೆಂಬುದನ್ನು ಕಾದು ನೋಡಬೇಕು ಎಂದು ತಿಳಿಸಿದರು.
ಜಿ.ಟಿ. ದೇವೇಗೌಡರ ಅಸಮಾಧಾನ ವಿಚಾರ ಕುರಿತು ಮಾತನಾಡಿ, ಇದು ಇದೇ ಮೊದಲೇನು ಅಲ್ಲ. ಈ ಹಿಂದೆ ವೈಮನಸ್ಸು ಬಂದಾಗ ನಾನೇ ಸೇತುವೆಯಾಗಿ ಕೆಲಸ ಮಾಡಿದ್ದೀನಿ. ಅವರನ್ನ ಮತ್ತೆ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಈ ಹಿಂದೆ ಪ್ರಮಾಣಿಕ ಕೆಲಸ ಮಾಡಿದ್ದೇನೆ. ಈಗಲೂ ಸಣ್ಣಪುಟ್ಟ ವೈಮನಸ್ಸನ್ನ ಹೊರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನ ಪಕ್ಷದ ಹಿರಿಯ ಶಾಸಕರು, ನಾವೆಲ್ಲ ಸೇರಿ ಸರಿ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 58 ಸ್ಥಾನ ಗೆಲ್ಲುವಂತೆ ಮಾಡುವುದು ನನ್ನ ಗುರಿ ಎಂದರು