ತುಮಕೂರು: ನಾಡಿಗೆ ವಿಶ್ವ ಮಾನವ ಸಂದೇಶ ಸಾರಿದ, ವಿಚಾರ ಕ್ರಾಂತಿಗೆ ಅಹ್ವಾನ ನೀಡಿದ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿವತಿಯಿಂದ ಆಚರಿಸಲಾಯಿತು.ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಮತ್ತು ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎನ್. ಕೆ. ನಿಧಿಕುಮಾರ್ ಅವರ ನೇತೃತ್ವದಲ್ಲಿ ನಡೆದ ಕುವೆಂಪು ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಸಿಹಿ ಹಂಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಎನ್. ಕೆ. ನಿಧಿಕುಮಾರ್, ಕುವೆಂಪು ಈ ನಾಡು ಕಂಡ ಅತ್ಯಂತ ವೈಚಾರಿಕ ಕವಿ. ಚರಿತ್ರೆಯನ್ನು ಮುರಿದು ಕಟ್ಟಬೇಕು ಎಂಬ ಬದ್ದಿಜೀವಿಗಳ ಮಾತಿನಂತೆ, ರಾಮಾಯಣದ ಶಂಭೂಕನ ವಧೆ ಪ್ರಸಂಗವನ್ನು ತಮ್ಮ ಶೂದ್ರ ತಪಸ್ವಿ ನಾಟಕದ ಮೂಲಕ ಒಂದು ವೈಚಾರಿಕ ನೆಲೆಯಲ್ಲಿ ಕಟ್ಟಿ, ಓದುಗರನ್ನು ಹೊಸ ಆಲೋಚನಾ ಕ್ರಮವನ್ನು ರೂಢಿಸಿದವರು ಕುವೆಂಪು. ವಿಚಾರಕ್ರಾಂತಿಗೆ ಅಹ್ವಾನ ಎಂಬ ಕೃತಿಯ ಮೂಲಕ ದೇಶ ಯಾವ ದಿಕ್ಕಿನತ್ತ ನಡೆಯಬೇಕು. ಯುವಜನತೆಯ ಆಲೋಚನೆ ಎತ್ತ ಸಾಗಬೇಕು ಎಂಬುದನ್ನು ನಿರೂಪಿಸಿ, ತಾವು ಅದೇ ರೀತಿ ನಡೆದು ತೋರಿಸಿದವರು ಕುವೆಂಪು. ಅವರ ಕೃತಿಗಳನ್ನು ಓದಿ, ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳಡಿಸಿಕೊಳ್ಳುವ ಮೂಲಕ ನಾಡನ್ನು ವೈಜ್ಞಾನಿಕ ಮತ್ತು ವೈಚಾರಿಕ ನೆಲೆಯಲ್ಲಿ ಕಟ್ಟಲು ಮುಂದಾಗಬೇಕಿದೆ ಎಂದರು.
ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರಸಮಿತಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಸ್. ರಾಮಚಂದ್ರರಾವ್ ಮಾತನಾಡಿ, ಅಡು ಮುಟ್ಟದ ಸೊಪ್ಪಿಲ್ಲ. ಕುವೆಂಪು ರಚಿಸದ ಸಾಹಿತ್ಯ ಪ್ರಕಾರಗಳಿಲ್ಲ ಎಂಬಂತೆ, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕುವೆಂಪು ಕೆಲಸ ಮಾಡಿದ್ದಾರೆ. ಪುರೋಹಿತ ಶಾಹಿಯ ಕಪಿಮುಷ್ಟಿಯಿಂದ ಕನ್ನಡ ನಾಡು ಮುಕ್ತವಾಗಿ, ವೈಜ್ಞಾನಿಕ, ವೈಚಾರಿಕೆ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳುವಂತಾಗಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಅಟ್ರಸಿಟಿ ಕಮಿಟಿಯ ಸದಸ್ಯರಾದ ಕೆ ಗೋವಿಂದರಾಜು, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಅಹ್ಮದ್, ನಗರ ಅಧ್ಯಕ್ಷರಾದ ರಫೀಕ್ಅಹ್ಮದ್, ಸಂಘಟನಾ ಕಾರ್ಯದರ್ಶಿ ಇಮ್ರಾನ್ಅಹಮದ್, ಜಿಲ್ಲಾ ಉಪಾಧ್ಯಕ್ಷರಾದ ಎಸ್. ನಾರಾಯಣ್, ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಟೈಲರ್ ಜಗದೀಶ್, ತುಮಕೂರು ತಾಲೂಕು ಗೌರವ ಅಧ್ಯಕ್ಷರಾದ ಗಂಗಾಧರ್. ಜಿ. ಆರ್, ಹನುಮನರಸಯ್ಯ, ಗಗನ್ ಬಿ. ವಿ. ರಾಮಣ್ಣ, ಇನ್ನು ಮುಂತಾದವರು ಉಪಸ್ಥಿತರಿದ್ದರು.