ಟ್ರೇಲರ್ ಹಾಗೂ ಹಾಡಿನ ಮೂಲಕ ಸದ್ದು ಮಾಡುತ್ತಿರುವ ಗಜರಾಮ ಸಿನಿಮಾ ಫೆಬ್ರವರಿ 7ಕ್ಕೆ ತೆರೆಗೆ ಬರ್ತಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ನಟನೆ ಮೂಲಕ ಗುರುತಿಸಿಕೊಂಡಿರುವ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಈ ಹಿನ್ನೆಲೆ ಚಿತ್ರತಂಡ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತು.
ಈ ವೇಳೆ ನಟ ರಾಜವರ್ಧನ್ ಮಾತನಾಡಿ, ನಾನು ಬೇರೆ ಸಿನಿಮಾದಲ್ಲಿ ನಟಿಸುವಾಗ ನಮ್ ಪ್ರೊಡ್ಯೂಸರ್ ನರಸಿಂಹ ಸರ್ ಬಂದು ಕಥೆ ಹೇಳಿದರು. ಈ ಚಿತ್ರಕ್ಕಾಗಿ ಸಾಕಷ್ಟು ಖರ್ಚು ಮಾಡಿದ್ದಾರೆ. ಇದು ನಿರ್ಮಾಪಕರಿಗೆ ಸಿನಿಮಾ ಮೇಲಿರುವ ಫ್ಯಾಷನ್. ಸುನಿಲ್ ಬಹಳ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಸುನಿ ಅವರಿಗೆ ಏನು ಮಾಡ್ಬೇಕು ಎಂಬ ಕ್ಲಾರಿಟಿ ಇದೆ. ಗಜರಾಮ ನನ್ನ ಜೀವನದ ಒಳ್ಳೆ ಸಿನಿಮಾ. ಪೈಲ್ವಾನ್ ಪಾತ್ರವನ್ನು ಬಹಳ ಇಸಿಯಾಗಿ ಮಾಡಲು ಆಗುವುದಿಲ್ಲ. ಪೈಲ್ವಾನರ ಕಷ್ಟವನ್ನು ನೋಡಿದ್ದೇನೆ. ಸಿನಿಮಾ ಚೆನ್ನಾಗಿ ಆದರೆ ರಿಯಲ್ ಪೈಲ್ವಾನ್ ನರನ್ನು ಇಡೀ ಸಿನಿಮಾ ತಂಡ ಭೇಟಿ ಮಾಡುತ್ತೇವೆ ಎಂದರು.
ನಿರ್ದೇಶಕರಾದ ಸುನಿಲ್ ಮಾತನಾಡಿದರು. ಗಜರಾಮ ಸಿನಿಮಾದಲ್ಲಿ ರಾಜವರ್ಧನ್ ಅವರು ಕುಸ್ತಿ ಅಖಾಡದಲ್ಲಿ ಪೈಲ್ವಾನ್ ಆಗಿ ತೊಡೆ ತಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಟ ಕಬೀರ್ ಸಿಂಗ್ ಅವರು `ಗಜರಾಮ’ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ದೀಪಕ್ ಅವರು ಪೊಲೀಸ್ ಪಾತ್ರದಲ್ಲಿ ಖದರ್ ತೋರಿಸಿದ್ದಾರೆ. ಈ ಸಿನಿಮಾದಲ್ಲಿ ನಟಿ ತಪಸ್ವಿನಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಮನೋಮೂರ್ತಿ ಅವರ ಸಂಗೀತ ಈ ಸಿನಿಮಾಗಿದೆ. ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರು ಕಾಣಿಸಿಕೊಂಡಿರುವ `ಸಾರಾಯಿ ಶಾಂತಮ್ಮ..’ ಹಾಡು ಈಗಾಗಲೇ ಹಿಟ್ ಆಗಿದೆ. ಈ ಸಿನಿಮಾಗೆ ಕೆ.ಎಸ್. ಚಂದ್ರಶೇಖರ್ ಅವರು ಛಾಯಾಗ್ರಹಣ ಮಾಡಿದ್ದಾರೆ.
ಜ್ಞಾನೇಶ್ ಬಿ.ಮಠದ್ ಅವರು ಸಂಕಲನ ಮಾಡಿದ್ದಾರೆ. ಧನಂಜಯ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಚಿನ್ಮಯ್ ಭಾವಿಕೆರೆ ಅವರು ಸಾಹಿತ್ಯ ಬರೆದಿದ್ದಾರೆ. ಕೆಲವು ನಿರ್ದೇಶಕರ ಜತೆ ಅಸಿಸ್ಟೆಂಟ್ ಹಾಗೂ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವ ಹೊಂದಿರುವ ಸುನಿಲ್ ಕುಮಾರ್ ಸ್ವತಂತ್ರ್ಯ ನಿರ್ದೇಶಕರಾಗಿದ್ದಾರೆ. ಈ ಮೊದಲು `ಬಾಂಡ್ ರವಿ’ ಚಿತ್ರವನ್ನು ನಿರ್ಮಿಸಿದ್ದ ನರಸಿಂಹ ಮೂರ್ತಿ ಅವರು `ಲೈಫ್ ಲೈನ್ ಫಿಲ್ಮ್ಸ್’ `ಗಜರಾಮ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.