ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ನಡೆದಿರುವ ಹೋರಾಟ ವೇದಿಕೆಗೆ ಆಗಮಿಸಿದ್ದ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರಿಗೆ ಮುಜುಗರ ಎದುರಾಗಿದ್ದು, ಕಾರಜೋಳ ಭಾಷಣದ ವೇಳೆ ರೈತರು ಗಲಾಟೆ ನಡೆಸಿದ್ದಾರೆ ಎನ್ನಲಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) 3ನೇ ಹಂತವನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತ ಜನಾಂದೋಲನ ಸಮಿತಿಯು ಬಾಗಲಕೋಟೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿನ ವಿಳಂಬದ ವಿಚಾರವಾಗಿ ನಡೆದಿರುವ ಹೋರಾಟ ಬೆಂಬಲಿಸಲು ಬಂದಿದ್ದ ಮಾಜಿ ಡಿಸಿಎಂ ಹಾಗೂ ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಭಾಷಣದ ವೇಳೆ ಗಲಾಟೆ ನಡೆಯಿತು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಅವರು ಧರಣಿ ನಿರತ ರೈತರನ್ನು ಉದ್ದೇಶಿಸಿ ಮಾತನಾಡುವಾಗ, ಸಭೆಯಲ್ಲಿದ್ದ ಕೆಲವರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಅಧಿಕಾರಾವಧಿಯಲ್ಲಿ ಬೃಹತ್ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ದೀರ್ಘಾವಧಿಯ ವಿಳಂಬವಾಗಿತ್ತು ಎಂದು ಟೀಕಿಸಿದರು. ಅಂತೆಯೇ ಎರಡು ಹಂತಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಪ್ರಸ್ತಾಪದ ಬಗ್ಗೆ ರೈತರು ಆತಂಕ ವ್ಯಕ್ತಪಡಿಸಿದರು.
ಮೊದಲ ಹಂತದಲ್ಲಿ ಜಲಾಶಯದ ಎತ್ತರವನ್ನು 519.6 ಮೀ ನಿಂದ 522 ಮೀ ಗೆ ಮತ್ತು ಎರಡನೇ ಹಂತದಲ್ಲಿ 522 ಮೀ ನಿಂದ 524.256 ಮೀ ಗೆ ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಯೋಜನೆ ವಿಳಂಬಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ದೂರಿದರು.
ಈ ಆರೋಪಗಳನ್ನು ತಳ್ಳಿ ಹಾಕಿದ ಕಾರಜೋಳ ಅವರು, ಪ್ರತಿಭಟನಾನಿರತ ರೈತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಅಂತಹ ಯಾವುದೇ ಪ್ರಸ್ತಾವನೆಯನ್ನು ತಮ್ಮ ಬಿಜೆಪಿ ಸರ್ಕಾರ ಪರಿಗಣಿಸಿರಲಿಲ್ಲ. ತಮ್ಮ ಆಡಳಿತದಲ್ಲಿ ಯುಕೆಪಿ ಯೋಜನೆಯಿಂದ ಹಾನಿಗೊಳಗಾದವರಿಗೆ ಪರಿಹಾರವನ್ನು ವಿತರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ತಾವು ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ 522 ಮೀಟರ್ ವರೆಗೆ ಪರಿಹಾರ ವಿತರಣೆ ಬಗ್ಗೆ ಸಭೆಯಲ್ಲಿ ಕೇವಲ ಚರ್ಚೆ ನಡೆದಿತ್ತು. ಆದರೆ ಸಭೆಯ ತೀರ್ಮಾನವಾಗಲಿ, ಸರ್ಕಾರದ ಆದೇಶವಾಗಲಿ ಅದಾಗಿಲ್ಲ ಈ ಬಗ್ಗೆ ಗೊಂದಲ ಬೇಡ ಎಂದರು. ಅಂತೆಯೇ ಜೆ.ಎಚ್.ಪಟೇಲ್ ಸರ್ಕಾರದ ನಂತರ ರೈತರಿಗೆ ಪರಿಹಾರ ವಿತರಿಸಲು ಭೂದರ ನಿಗದಿಯಾಗಿರಲಿಲ್ಲ. ನಮ್ಮ ಅವಧಿಯಲ್ಲಿ ನೀರಾವರಿಗೆ 24 ಲಕ್ಷ ರೂ., ಒಣಬೇಸಾಯಕ್ಕೆ 20 ಲಕ್ಷ ರೂ. ಘೋಷಿಸಲಾಗಿತ್ತು. ಅಂದು 40 ಲಕ್ಷ ಕೊಡ್ತೀವಿ ಅಂದವರು ಈಗ ನಿಮ್ಮದೆ ಸರ್ಕಾರವಿದೆ ಕೊಟ್ಟು ತೋರಿಸಿ ಎಂದು ಕಾರಜೋಳ ಸವಾಲೆಸೆದರು.
ಆಗ ಸಭೆಯಲ್ಲಿದ್ದ ಕೆಲವರು 522 ಮೀಟರ್ ವರೆಗಿನ ತೀರ್ಮಾನ ನಿಮ್ಮದೇ ಸರ್ಕಾರದ ತೀರ್ಮಾನವಾಗಿತ್ತು ಎಂದರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆರಳಿದ ಕಾರಜೋಳ ಅವರು, ಅನಗತ್ಯ ಪಕ್ಷ ರಾಜಕಾರಣ ತರಬೇಡಿ. ನಾನು ಇತಿಹಾಸ ಬಿಚ್ಚಿಟ್ಟರೆ ಕಾಂಗ್ರೆಸ್ನವರು ರಾಜ್ಯದಲ್ಲೇ ಇರುವುದಿಲ್ಲ ಎಂದರು.
ವೇದಿಕೆಯಲ್ಲಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರನ್ನುದ್ದೇಶಿಸಿ ಮಾತನಾಡಿದ ಕಾರಜೋಳ ಅವರು ಎಕರೆಗೆ 40 ಲಕ್ಷ ರೂ. ನಿಮ್ಮ ಸರ್ಕಾರ ನೀಡಿದರೆ ನಿಮಗೆ ಇದೇ ವೇದಿಕಯಲ್ಲಿ ಬಂಗಾರದ ಕಿರೀಟ ತೊಡಿಸುವೆ, ಮುಖ್ಯಮಂತ್ರಿಗಳನ್ನು ಸನ್ಮಾನಿಸುವೆ ಎಂದರು.