ಮಾಗಡಿ: ಇತ್ತೀಚೆಗಷ್ಟೆ ದಲಿತ ಒಕ್ಕಲಿಗ ಸಮುದಾಯ ಸೇರಿದಂತೆ ಗುತ್ತಿಗೆದಾರನಿಗೆ ಧಮಕಿ ಕೊಲೆ ಬೆದರಿಕೆ ಕೇಸಿನಲ್ಲಿ ಹೊರಬಂದು ಮತ್ತೆ ಹನಿಟ್ರಾಪ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿರುವ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರ ಶಾಸಕ ಸ್ಥಾನವನ್ನು ಮಾನ್ಯ ಘನತೆವೆತ್ತ ರಾಜ್ಯಪಾಲರು ರದ್ದುಗೊಳಿಸಬೇಕು ಎಂದು ಎಸ್ಸಿ ಎಸ್ ಟಿ ಕುದೂರು ತಿಪ್ಪಸಂದ್ರ ಹೋಬಳಿಯ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕನ್ನಸಂದ್ರ ರವಿಕುಮಾರ್ ಹೇಳಿದರು.
ತಾಲ್ಲೂಕಿನ ಕುದೂರು ರಾಮಲೀಲ ಮೈದಾನದಿಂದ ನಾಡ ಕಚೇರಿವರೆಗೆ ದಲಿತ ಸಂಘರ್ಷ ಸಮಿತಿ ಮತ್ತು ಕುದೂರು ಹಾಗೂ ತಿಪ್ಪಸಂದ್ರ ಹೋಬಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ದಲಿತರ ಬಗೆಗಿನ ಜಾತಿನಿಂದನೆ ಜೀವ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ಬಂದಿತನಾಗಿರುವ ಶಾಸಕ ಮುನಿರತ್ನನಾಯ್ಡು ಈ ಸಮಾಜದ ದುಸ್ಕೃತ್ಯ ಮನಸ್ಥಿತಿಯವನಾಗಿದ್ದು ಈತನಿಗೆ ಅಟ್ರಾಸಿಟಿ ಕೇಸಿನಲ್ಲಿ ಬಂಧಿಸಿದ್ದರೂ ಸಹ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಇದೀಗ “ಹನಿಟ್ರಾಪ್”ಕೇಸಿನಲ್ಲಿ ನ್ಯಾಯಾಂಗ ಬಂಧನವಾಗಿದ್ದಾನೆ.ಈತನು ಹೊರಬರದಂತೆ ಬಿಗಿ ಕಾನೂನಿನ ಕುಣಿಕೆಯಾಗಬೇಕು.ಜೊತೆಗೆ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು.ದಲಿತ ಸಮುದಾಯದವರಿಂದ “ಮತಪಡೆದು”ಅವರ ಹೆಣ್ಣುಮಕ್ಕಳನ್ನೇ ತನ್ನ ಕಾಮ ತೃಷೆಗೆ ಕರೆಯುವ ಮುನಿರತ್ನನಾಯ್ಡುನನ್ನು ಮಾನ್ಯ ರಾಜ್ಯಪಾಲರು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.
ಎಸ್ಸಿ ಎಸ್.ಟಿ.ವರ್ಗಗಳ ಹಿತರಕ್ಷಣಾ ಸಮಿತಿ ರಾಜ್ಯ ಸರ್ಕಾರದ ನಾಮ ನಿರ್ದೇಶಕರಾದ ತೊರೆರಾಮನಹಳ್ಳಿ ನರಸಿಂಹಮೂರ್ತಿ ಮಾತನಾಡಿ ಭಾರತ ದೇಶ ಪ್ರಜಾಪ್ರಭುತ್ವ ದೇಶವಾಗಿದೆ.ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದಡಿಯಲ್ಲಿ ನಾವುಗಳು ಬದುಕುತ್ತಿದ್ದೇವೆ.ಸರ್ವೇ ಜನೋ ಸುಖೀ ಭವಂತೇ ಎಂದು ಸ್ಪಷ್ಟವಾದ ಸಂದೇಶ ಸಾರುವ ನಾಡು ನಮ್ಮದು.ಜನಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಸರ್ವರಲ್ಲಿಯೂ ಗೌರವಯುತವಾಗಿ ನಡೆದುಕೊಳ್ಳಬೇಕು.
ಆದರೆ ಶಾಸಕ ಮುನಿರತ್ನ ರಾಜ್ಯದ ಪ್ರಮುಖ ಸಮುದಾಯಗಳಾದ ದಲಿತ ಹಾಗೂ ಒಕ್ಕಲಿಗ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ಉಚ್ಚರಿಸಿರುವುದನ್ನು ನಾವು ಖಂಡಿಸುತ್ತೇವೆ.ಆತನು ಶಾಸಕನಾಗಲು ನಮ್ಮಗಳ ಮತಗಳೇ ನಿರ್ಣಾಯಕವಾಗಿದೆ.ಈತನಿಗೆ ಬಹಿರಂಗವಾಗಿ ಒಂದು ಮುಖ ಅಂತರಂಗವಾಗಿ ಮತ್ತೊಂದು ಮುಖ ಎಂದು ಸಾಭೀತಾಗಿದೆ.ಈತನಿಗೆ ವಿಧಿಸುವ ಶಿಕ್ಷೆಯು ಕಠಿಣವಾಗಿರಬೇಕು.ಇದರಿಂದ ಮತ್ತೊಬ್ಬ ಪ್ರತಿನಿಧಿ ಯಾರನ್ನು ಕೀಳು ಮನಸ್ಥಿತಿಯಲ್ಲಿ ಮಾತನಾಡಬಾರದು ಎಂಬ ಸಂದೇಶವು ರವಾನೆಯಾಗಬೇಕು ಎಂದು ನರಸಿಂಹಮೂರ್ತಿ ವಿವರಣೆ ನೀಡಿದರು.
ಯುವ ದಲಿತ ಮುಖಂಡರಾದ ಕುದೂರು ಮಂಜೇಶ್ ಕುಮಾರ್ ಮಾತನಾಡಿ ಮುನಿರತ್ನನಾಯ್ಡು ದಲಿತರು ಒಕ್ಕಲಿಗರನ್ನು ಹೀನಾಯವಾಗಿ ಬೈದಿರುವ ಜೊತೆಗೆ ಈ ಹಿಂದೆ ಪ್ರತಿಪಕ್ಷದ ನಾಯಕ ಆರ್.ಅಶೋಕ್,ಮಾಜಿ ಸಂಸದ ಡಿ.ಕೆ.ಸುರೇಶ್,ಈತನ ಪ್ರತಿಸ್ಪರ್ಧಿ ಕುಸುಮಾ ಹನುಮಂತರಾಯಪ್ಪ ಅವರಿಗೆ ಏಯ್ಡ್ಸ್ ರಕ್ತ ಮಿಶ್ರಣ ಚುಚ್ಚುಮದ್ದನ್ನು ಹಾಕಿಸಲು ಮುಂದಾಗಿರುವುದು ಆಶ್ಚರ್ಯ ಹಾಗೂ ಭಯವಾಗುತ್ತದೆ.ರಾಜಕೀಯದಲ್ಲಿ ಸಾಕಷ್ಟು ಷಡ್ಯಂತ್ರಗಳು ನಡೆಯುತ್ತವೆ.ಆದರೆ ಏಯ್ಡ್ಸ್ ಇಂಜೆಕ್ಟ್ ಮಾಡಿಸಲು ಮುಂದಾಗಿರುವುದನ್ನು ಗಮನಿಸಿದರೆ ಈತ ಒಬ್ಬ ಮನುಕುಲದ ಸಮಾಜದ ಘಾತುಕನಾಗಿದ್ದಾರೆ.
ಈ ಎಲ್ಲಾ ಪ್ರಕರಣವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿ ಈತನಿಗೆ ಮತ್ತೆ ಹೊರಬಾರದಂತಹ ಶಿಕ್ಷೆ ವಿಧಿಸಬೇಕು ಎಂದು ಮಂಜೇಶ್ ಒತ್ತಾಯಿಸಿದರು.ತಿಪ್ಪಸಂದ್ರ ಗ್ರಾಪಂ ಅದ್ಯಕ್ಷೆ ವೀಣಾ ಕುಮಾರಸ್ವಾಮಿ, ತಾಪಂ ಮಾಜಿ ಸದಸ್ಯೆ ದಿವ್ಯಾರಾಣಿ ಚಂದ್ರಶೇಖರ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಸುಗ್ಗನಹಳ್ಳಿ ಕುಮಾರ್, ದಲಿತ ಮುಖಂಡರಾದ ಗಂಗಹನುಮಯ್ಯ, ಕೇಶವಮೂರ್ತಿ, ನೇತ್ರಾವತಿ, ದೊಡ್ಡಿಲಕ್ಷ್ಮಣ್, ಮಲ್ಲಿಗುಂಟೆ ರಾಜು, ಸುಗ್ಗನಹಳ್ಳಿ ಚಿಕ್ಕರಾಜು, ಲಕ್ಕೇನಹಳ್ಳಿ ಮುನಿರಾಜು, ಕುದೂರು ಅಭಿಷೇಕ್, ಚಿಕ್ಕಯ್ಯನಪಾಳ್ಯ ದೊಡ್ಡಯ್ಯ, ನಾಗರಾಜು ಸೇರಿದಂತೆ ಮತ್ತಿತರಿದ್ದರು.