ವಾಷಿಂಗ್ಟನ್: ಆಂತರಿಕ ರಾಜಕೀಯ ಮೇಲಾಟದಿಂದಾಗಿ ಕೆನಡಾ ಪ್ರಧಾನಿ ಹುದ್ದೆಗೆ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಅಮೆರಿಕ ನಿಯೋಜಿತ ಅಧ್ಯಕ್ಷ ‘ಕೆನಡಾ-ಅಮೆರಿಕ ವಿಲೀನ’ದ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಹೌದು.. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಯುಎಸ್ ಅಧ್ಯಕ್ಷ ಚುನಾಯಿತ ಡೊನಾಲ್ಡ್ ಟ್ರಂಪ್ ಸೋಮವಾರ ಕೆನಡಾವನ್ನು ಅಮೆರಿಕದೊಂದಿಗೆ 51 ನೇ ರಾಜ್ಯವನ್ನಾಗಿ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ.
2017-2021ರ ಮೊದಲ ಅವಧಿಯಲ್ಲಿ ಟ್ರೂಡೊ ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ. ಬಳಿಕ ನವೆಂಬರ್ 5 ರ ಚುನಾವಣಾ ವಿಜಯದ ನಂತರ ಟ್ರುಡೊ ಅವರನ್ನು ಭೇಟಿಯಾದಾಗಿನಿಂದ ಕೆನಡಾವನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡುವ ಆಲೋಚನೆ ಟ್ರಂಪ್ ಅವರಲ್ಲಿತ್ತು. ಈ ಬಗ್ಗೆ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರಂಪ್ ಪೋಸ್ಟ್ ಕೂಡ ಮಾಡುತ್ತಿದ್ದರು. ಇದೀಗ ಅಂತಹುದೇ ಮತ್ತೊಂದು ಟ್ವೀಟ್ ಮಾಡಿದ್ದಾರೆ.
“ಕೆನಡಾದಲ್ಲಿ ಅನೇಕ ಜನರು ಕೆನಡಾವನ್ನು ಅಮೆರಿಕದೊಂದಿಗೆ ವಿಲೀನ ಮಾಡಿ ಅದನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡಲು ಇಷ್ಟಪಡುತ್ತಾರೆ. ಕೆನಡಾ ವಿಲೀನವಾದರೆ ಅದಕ್ಕೆ ಅಗತ್ಯವಿರುವ ಬೃಹತ್ ವ್ಯಾಪಾರ ಕೊರತೆಗಳು ಮತ್ತು ಸಬ್ಸಿಡಿಗಳು ಅಗತ್ಯತೆ ಇನ್ನು ಮುಂದೆ ಬೇಕಾಗುವುದಿಲ್ಲ. ಜಸ್ಟಿನ್ ಟ್ರುಡೊ ಅವರಿಗೂ ಇದು ತಿಳಿದಿತ್ತು. ಇದೀಗ ರಾಜೀನಾಮೆ ನೀಡಿದ್ದಾರೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂತೆಯೇ, “ಕೆನಡಾವು ಅಮೆರಿಕದೊಂದಿಗೆ ವಿಲೀನಗೊಂಡರೆ, ಯಾವುದೇ ಸುಂಕಗಳು ಇರುವುದಿಲ್ಲ, ತೆರಿಗೆಗಳು ಕಡಿಮೆಯಾಗುತ್ತವೆ ಮತ್ತು ನಿರಂತರವಾಗಿ ಸುತ್ತುವರಿದಿರುವ ರಷ್ಯಾದ ಮತ್ತು ಚೀನೀ ಹಡಗುಗಳ ಬೆದರಿಕೆಯಿಂದ ಅವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತವೆ ಎಂದು ಟ್ರಂಪ್ ಹೇಳಿದ್ದಾರೆ.
ಇದಕ್ಕೂ ಮೊದಲು ಟೊರೊಂಟೊ (ಕೆನಡಾ ರಾಜಧಾನಿ) ಅಮೆರಿಕದ ದಕ್ಷಿಣ ಗಡಿಯಿಂದ ಅಕ್ರಮ ಡ್ರಗ್ಸ್ ಮತ್ತು ಅಕ್ರಮ ವಲಸಿಗರ ಹರಿವನ್ನು ತಡೆಯಲು ಸಾಧ್ಯವಾಗದಿದ್ದರೆ ಕೆನಡಾದ ಆಮದುಗಳ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದರು.
ಇನ್ನು ಅಮೆರಿಕ ನಿಯೋಜಿತ ಅಧ್ಯಕ್ಷ ಟ್ರಂಪ್ ಅವರ ಈ ನೂತನ ಪ್ರಸ್ತಾಪಕ್ಕೆ ಕೆನಡಾದ ಕಡೆಯಿಂದ ಹೆಚ್ಚಿನ ಪ್ರತಿಕ್ರಿಯೆ ಬಂದಿಲ್ಲ.
53 ವರ್ಷದ ಟ್ರೂಡೊ ಅವರು ತಮ್ಮ ಬೆಳೆಯುತ್ತಿರುವ ಜನಪ್ರಿಯತೆಯ ಹೊರತಾಗಿಯೂ ತಮ್ಮ ಆಡಳಿತಾರೂಢ ಲಿಬರಲ್ ಪಕ್ಷದ ಆಂತರಿಕ ಕಲಹ ಮತ್ತು ರಾಜಕೀಯ ಮೇಲಾಟದಿಂದಾಗಿ ಬಲವಂತವಾಗಿ ಸೋಮವಾರ ರಾಜೀನಾಮೆ ನೀಡಿದ್ದಾರೆ. ಈ ವರ್ಷ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದ್ದು. ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ತಾನು ಪ್ರಧಾನಿಯಾಗಿ ಮುಂದುವರಿಯುತ್ತೇನೆ ಎಂದು ಟ್ರುಡೋ ಹೇಳಿದ್ದಾರೆ.
ಖಲಿಸ್ತಾನಿ ಪರ ನೀತಿ ಹೊಂದಿರುವ ಟ್ರುಡೋ ಇತ್ತೀಚೆಗೆ ತಮ್ಮ ಭಾರತ ವಿರೋಧಿ ನಿಲುವುಗಳಿಂದ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಪ್ರಮುಖವಾಗಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸುವ ಮೂಲಕ ಭಾರತದ ಕೆಂಗಣ್ಣಿಗೆ ತುತ್ತಾಗಿದ್ದರು. ಇದೀಗ ಇಂತಹ ಅವರ ನಿಲುವುಗಳಿಂದಲೇ ಅವರಿಗೆ ಸ್ವಪಕ್ಷದಿಂದಲೇ ವ್ಯಾಪಕ ವಿರೋಧ ಎದುರಾಗಿತ್ತು. ಇದೀಗ ಅವರು ರಾಜಿನಾಮೆ ಘೋಷಣೆ ಮಾಡಿದ್ದಾರೆ.