ಬೆಂಗಳೂರು: ನಗರದ ಕೆನ್ ಕಲಾ ಶಾಲೆಯಲ್ಲಿ ರವಿಕಿರಣ ಸಾಹಿತ್ಯ ಪ್ರತಿಷ್ಠಾನದ 106ನೇ ಕಾರ್ಯಕ್ರಮ ಹಾಗೂ ಪ್ರತಿಭಾ ಹೊಂಗಿರಣ ವೇದಿಕೆಯ 56 ನೇ ಕಾರ್ಯಕ್ರಮ ಆಯೋಜನೆಯಾಗಿತ್ತು.
ನಾಡು ಕಂಡ ಅಪ್ರತಿಮ ಸಾಹಿತಿ ದಿ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮದಿನದ ನಿಮಿತ್ತ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಜೈನ್ ಕಾಲೇಜಿನ ಉಪನ್ಯಾಸಕ ಶ್ರೀನಿವಾಸಯ್ಯ ನವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ವ್ಯಕ್ತಿತ್ವ ಹಾಗೂ ಬರಹದ ಕುರಿತಾಗಿ ವಿಶೇಷ ಮಾಹಿತಿಗಳನ್ನು ವಿವರಿಸಿದರು.
ಜನಪ್ರಿಯ ನಾಟಕ ಗರುಡಗಂಭದ ಕುರಿತಾಗಿ ಸಮಗ್ರವಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಗಾಯಕಿಯಾದ ಶ್ರೀಮತಿ ರೂಪಶ್ರೀ ಮೋಹನ್ ರವರು ಕಲಾಭಿಮಾನಿಯಾಗಿದ್ದು ಗಾಯನವನ್ನು ಉತ್ತಮವಾಗಿ ಹಾಡಿ ಎಲ್ಲರ ಪ್ರಶಂಸನೆಗೆ ಭಾಜನರಾದರು ಹಾಗೂ ವಿಶೇಷ ಚೇತನರಿಗೆ ಕಲಿಕಾ ಮನೆ ಎಂಬ ಶಾಲೆಯನ್ನು ನಡೆಸುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಪ್ರೀತಿ ಭರತ್ ರವರ ಚಿನ್ನಾ ಎಂದೂ ನಗುತಿರು ಕೃತಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವೇದಿಕೆಯ ಉಮೇಶ್.ಸಿ.ಎನ್ ಹಾಗೂ ರಾಧಾತನಯ ಉಪಸ್ಥಿತರಿದ್ದರು.