ಬೆಂಗಳೂರು: ವೈಟ್ಫೀಲ್ಡ್ನ ಬ್ರೂಕ್ ಫೀಲ್ಡ್ ನಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆಸಿದ್ದ ಎನ್ನಲಾದ ಉಗ್ರನನ್ನು ಇಂದು ಮುಂಜಾನೆ ಕರೆತಂದು ಇಡೀ ಘಟನೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು ಮರುಸೃಷ್ಠಿ(ರಿಕ್ರಿಯೇಟ್) ಮಾಡಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಬಹುತೇಕ ಅಂತಿಮ ಹಂತಕ್ಕೆ ತಂದಿರುವ ಎನ್ಐಎ ಅಧಿಕಾರಿಗಳು ಮುಂಜಾನೆ ಬಾಂಬ್ ಇರಿಸಿದ ಭಯೋತ್ಪಾದಕ ಮುಜಾವೀರ್ ಹುಸೇನ್ ಶಾಜಿಬ್ನನ್ನೂ ಕೆಫೆಗೆ ಕರೆತಂದು ಘಟನೆ ಕಳೆದ ಮಾರ್ಚ್ 1ರಂದು ನಡೆದಿದ್ದ ಸ್ಫೋಟ ಮರುಸೃಷ್ಠಿ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಮರುಸೃಷ್ಠಿಯ ಹಿನ್ನಲೆಯಲ್ಲಿ ರಾಮೇಶ್ವರಂ ಕೆಫೆಯ ಸುತ್ತಮುತ್ತಲಿನ ಪ್ರದೇಶವನ್ನು ಇಂದು ಸಾರ್ವಜನಿಕರಿಗೆ ಬಂದ್ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಸ್ಫೋಟವನ್ನು ಮರು ಸೃಷ್ಟಿ ಮಾಡಿಸಲಾಯಿತು. ಆರೋಪಿ ಮುಜಾವೀರ್ ಹುಸೇನ್ ಶಾಜಿಬ್ ಕೃತ್ಯದ ದಿನ ಎಲ್ಲಿಂದ, ಹೇಗೆ ನಡೆದುಕೊಂಡು ಬಂದ, ಕೆಫೆಯ ಒಳಗಡೆ ಎಲ್ಲೆಲ್ಲಿ ಸುತ್ತಾಡಿದ್ದ, ಎಲ್ಲಿ ಬ್ಯಾಗ್ ಇಟ್ಟಿದ್ದ, ನಂತರ ತೆರಳಿದ್ದು ಹೇಗೆ, ಇದೆಲ್ಲವನ್ನೂ ಉಗ್ರನಿಂದಲೇ ರೀಕ್ರಿಯೆಟ್ ಮಾಡಿಸಿ ವಿಡಿಯೋ ಮಾಡಿಕೊಳ್ಳಲಾಯಿತು.
ಕೃತ್ಯ ನಡೆಸಿದ ಸಂದರ್ಭದಲ್ಲಿ ಆತ ಧರಿಸಿದ್ದ ಬಟ್ಟೆ ಹಾಗೂ ಕ್ಯಾಪ್ ಅನ್ನು ಆತನಿಗೆ ತೊಡಿಸಲಾಗಿದೆ. ಅವತ್ತಿನ ರೀತಿ ಬ್ಲಾಕ್ ಬ್ಯಾಗ್ ಹೆಗಲಿಗೆ ಹಾಕಿಕೊಂಡು ವಿಡಿಯೋ ಮರುಸೃಷ್ಟಿ ಮಾಡಿಸಲಾಗಿದೆ. ಎಲ್ಲವನ್ನೂ ಎನ್ಐಎ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.