ಮುಂಬೈ: ಜೈಪುರ ಟ್ಯಾಂಕರ್ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಇತ್ತ ಮಹಾರಾಷ್ಟ್ರದಲ್ಲೂ ಅಂತಹುದೇ ಘಟನೆಯೊಂದು ವರದಿಯಾಗಿದೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಹೆದ್ದಾರಿಯ ಬಳಿ ಬುಧವಾರ ಬೆಳಿಗ್ಗೆ ರಾಸಾಯನಿಕ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖೋಪೋಲಿ ಪ್ರದೇಶದ ಹೆದ್ದಾರಿ ನಿರ್ಗಮನದ ಬಳಿಯ ಶಿಲ್ಪಾಟಾದ ಪಟೇಲ್ ನಗರದಲ್ಲಿ ಬೆಳಿಗ್ಗೆ 6.15 ಕ್ಕೆ ಈ ಘಟನೆ ನಡೆದಿದ್ದು, ಮೊದಲು ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು ಬಳಿಕ ಟ್ಯಾಂಕರ್ ನಲ್ಲಿದ್ದ ರಾಸಾಯನಿಕ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ.
ವಿಷಯ ತಿಳಿದ ಕೂಡಲೇ ಖೋಪೋಲಿ ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಟಾಟಾ, ಗೋದ್ರೇಜ್ ಗುಂಪುಗಳು, HPCL ಮತ್ತು JSW ನ ಅಗ್ನಿಶಾಮಕ ವಾಹನಗಳು ಸಹ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದವು. ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅಧಿಕಾರಿ ಹೇಳಿದರು.
ಟ್ಯಾಂಕರ್ ಗೆ ಬೆಂಕಿಹೊತ್ತಿಕೊಂಡ ಪರಿಣಾಮ ಹೆದ್ದಾರಿಯಲ್ಲಿ ಸಂಚಾರಕ್ಕೆ ಒಂದೆರಡು ಗಂಟೆಗಳ ಕಾಲ ತೊಂದರೆಯಾಗಿತ್ತು.