ಮಧುಗಿರಿ : ಕೃಷಿಹೊಂಡದಲ್ಲಿ ಸೋಡಿಯಂ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ ಆರೋಪದ ಮೇಲೆ ಡ್ರೋನ್ ಪ್ರತಾಪ್ ನ ದಸ್ತಗಿರಿ ಮಾಡಲಾಗಿದ್ದು, ಇಲ್ಲಿನ ಪ್ರಿನ್ಸಿಪಲ್ ಸಿವಿಲ್ ಸೀನಿಯರ್ ನ್ಯಾಯಾಲಯದ ನ್ಯಾಯಾಧೀಶರುಆತನಿಗೆ ಡಿಸೆಂಬರ್ 16 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಮಾಹಿತಿ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಾತನಾಡಿದ ಅವರು ಮಿಡಿಗೇಶಿ ಹೋಬಳಿ ಜನಕಲೋಟಿ ಗ್ರಾಮದ ಜಮೀನಿನ ಕೃಷಿ ಹೊಂಡದಲ್ಲಿ ಸುಮಾರು 15 ದಿನಗಳ ಹಿಂದೆ ಕೆಮಿಕಲ್ ಬ್ಲಾಸ್ಟ್ ಮಾಡಲಾಗಿತ್ತು ಎಂದು ತಿಳಿಸಿದರು.ಮಿಡಿಗೇಶಿ ಪೊಲೀಸರು ಸ್ಥಳ ಮಹಜರು ಮಾಡಿದ್ದು, ಕೃತ್ಯಕ್ಕೆ ಬಳಸಿದ್ದ ಸೋಡಿಯಂ ಮೆಟಲ್ ಬಾಕ್ಸ್ ನ್ನು ವಶಪಡಿಸಿಕೊಂಡು ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಲಯವು ಆತನನ್ನು ನಮ್ಮ ವಶಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಶ್ರೀರಾಯರ ಬೃಂದಾವನ ಫಾರ್ಮ್ ನಲ್ಲಿ ಸ್ನೇಹಿತರ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ಸೋಡಿಯಂ ರಾಸಾಯನಿಕ ಸೇರಿಸಿ ನೀರಿನಲ್ಲಿ ಸ್ಪೋಟಿಸಿದ್ದ ಡೋಣ್ ಪ್ರತಾಪ್ ದೃಷ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು.ಇದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಆರೋಪಿಯನ್ನು ನಡುರಾತ್ರಿ ಬೆಂಗಳೂರಲ್ಲಿ ಬಂಧಿಸಿ ಬಿಎನ್ಎಸ್ ಕಾಯ್ದೆ 288 ಮತ್ತು ಸ್ಫೋಟಕ ವಸ್ತುಗಳ ನಿಷೇಧ ಕಾಯ್ದೆ ಸಕ್ಷನ್ 3 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಈ ಕೃತ್ಯದಲ್ಲಿ ಪ್ರಕರಣಕ್ಕೆ ಅವಕಾಶ ಮಾಡಿಕೊಟ್ಟ ಜಮೀನು ಮಾಲಿಕ ಸೇರಿದಂತೆ ಇತರರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದ್ದು, ಉಳಿದವರನ್ನೂ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಮಹಜರ್ ಸ್ಥಳದಲ್ಲಿ ಡಿವೈಎಸ್ಪಿ ರಾಮಚಂದ್ರಪ್ಪ, ಬಡವನಹಳ್ಳಿ ಪಿಐ ಕಾಂತರೆಡ್ಡಿ, ಮಿಡಿಗೇಶಿ ಪಿಎಸ್ಐಮಹಮ್ಮದ್ ಪೈಗಂಬರ್, ಎಫ್.ಎಸ್.ಎಲ್ ತಂಡ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.