ಪಾಂಡವಪುರ: ತಾಲೂಕಿನ ಹುಳಿಗೆರೆ ಕೆರೆ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 1ಕೋಟಿ ರೂ. ಮಂಜೂರಾಗಿದ್ದು, ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನ ಹುಳಿಗೆರೆ ಕೆರೆ ಅಭಿವೃದ್ಧಿ ಕಾಮಗಾರಿಗೆ 1ಕೋಟಿ ರೂ. ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಕಾಮಗಾರಿಯಲ್ಲಿ ಕೆರೆ ಕೋಡಿ ಹಳ್ಳದಲ್ಲಿ 106ಮೀಟರ್ ವರೆಗೆ ಸಂರಕ್ಷಣಾ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಜತೆಗೆ ಎರಡು ಬಾಕ್ಸ್ ಕಲ್ವರ್ಟ್ ನಿರ್ಮಾಣ ಮಾಡಲಾಗುವುದು ಹಾಗೂ ಫೀಡರ್ ಹಳ್ಳ ಮತ್ತು ಕೋಡಿಹಳ್ಳದಲ್ಲಿ ಜಂಗಲ್ ಮತ್ತು ಹೂಳು ತೆಗೆಯುವ ಕೆಲಸದ ಜತೆಗೆ ಚರಂಡಿ ಸ್ವಚ್ಚಗೊಳಿಸಲಾಗುವುದು.
ಇದಕ್ಕಾಗಿ 1 ಕೋಟಿ ರೂ. ಮಂಜುರಾಗಿದೆ. ಇನ್ನು ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಸರ್ಕಾರದಿಂದ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದರು.
ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ ಮಾಜಿ ಸದಸ್ಯ ಎಚ್.ತ್ಯಾಗರಾಜು, ನಾರಾಯಣಪುರ ಗ್ರಾ.ಪಂ ಅಧ್ಯಕ್ಷ ಕೋಡಾಲ ಪ್ರಕಾಶ್, ಮಾಜಿ ಅಧ್ಯಕ್ಷ ಹೊಸಹಳ್ಳಿ ನಾಗರಾಜು, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜನೀಯರ್ ಶಂಕರ್, ಸಹಾಯಕ ಕಾರ್ಯಪಾಲಕ ಇಂಜನೀಯರ್ ನಿರ್ಮಲೇಶ್, ಸಹಾಯಕ ಇಂಜನೀಯರ್ ವಿಜಯದರ್ಶನ್ ಹಾಗೂ ರೈತಸಂಘದ ಮುಖಂಡರು, ಗ್ರಾಮದ ಯುವಕರು ಸೇರಿದಂತೆ ಇತರರಿದ್ದರು.