ಬೆಂಗಳೂರು: ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ಸ್ವದೇಶ್ ದರ್ಶನ್ ಯೋಜನೆಗೆ ಕರ್ನಾಟಕದ ಎರಡು ಪ್ರವಾಸೋದ್ಯಮ ಸಂಭಾವ್ಯ ತಾಣಗಳಾದ ಬೀದರ್ ಮತ್ತು ಉಡುಪಿಯನ್ನು ಆಯ್ಕೆ ಮಾಡಿದೆ.
ಸ್ವದೇಶ್ ದರ್ಶನ್ ಯೋಜನೆಯ ಭಾಗವಾಗಿ ಈ ಎರಡು ಜಿಲ್ಲೆಯ ಪ್ರವಾಸಿ ತಾಣಗಳನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸುವುದು ಮಾತ್ರವಲ್ಲದೆ, ಹೆಚ್ಚಿನ ಸೌಲಭ್ಯಗಳೊಂದಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುವಂತೆ ಸ್ಪರ್ಧಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.
ಸ್ವದೇಶ್ ದರ್ಶನ್ ಯೋಜನೆಗೆ, ಪ್ರವಾಸೋದ್ಯಮ ಸಚಿವಾಲಯವು ದೇಶದ 42 ತಾಣಗಳನ್ನು ಪಟ್ಟಿ ಮಾಡಿದ್ದು ಅವುಗಳಲ್ಲಿ ಬೀದರ್ ಮತ್ತು ಉಡುಪಿಯನ್ನು ಆಯ್ಕೆ ಮಾಡಿದ್ದು, ಕ್ರಮವಾಗಿ 25 ಕೋಟಿ ಮತ್ತು 10 ಕೋಟಿ ರೂ. ಅನುದಾನ ನೀಡಲಿದೆ.
“ಬೀದರ್ ಅನ್ನು ಸಾಂಸ್ಕೃತಿಕ ವರ್ಗದ ಅಡಿಯಲ್ಲಿ ಸುಧಾರಿಸಲಾಗಿದ್ದರೂ, ಉಡುಪಿಯನ್ನು ಪರಿಸರ ಪ್ರವಾಸೋದ್ಯಮ ಮತ್ತು ಅಮೃತ್ ಧರೋಹರ್ ಯೋಜನೆಯಡಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಎರಡು ಯೋಜನೆಗಳು ಆರಂಭಿಕ ಹಂತದಲ್ಲಿವೆ. ಕೈಗೆತ್ತಿಕೊಳ್ಳಬೇಕಾದ ಕಾರ್ಯಗಳಿಗಾಗಿ ನಾವು ಯೋಜನಾ ವರದಿಯನ್ನು ಸ್ವೀಕರಿಸಿದ್ದೇವೆ. ಇದನ್ನು ಅನುಮೋದನೆಗಾಗಿ ಸಚಿವಾಲಯಕ್ಕೆ ಕಳುಹಿಸಲಾಗುತ್ತಿದೆ, ನಂತರ ಅದನ್ನು ಮುಂಬರುವ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವಾಲಯದ ನಿರ್ದೇಶಕ ಮೊಹಮ್ಮದ್ ಫಾರೂಕ್ ಅವರು ತಿಳಿಸಿದ್ದಾರೆ.
ಈ ಯೋಜನೆ ಅಡಿಯಲ್ಲಿ “ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಲಾಗುವುದು. ಇದು ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸಲು, ಹೊಸ ತಾಣಗಳನ್ನು ಕಂಡುಹಿಡಿಯುವುದು ಮತ್ತು ಅಸ್ತಿತ್ವದಲ್ಲಿರುವ ತಾಣಗಳನ್ನು ಪ್ರವಾಸಿ ಸ್ನೇಹಿಯನ್ನಾಗಿ ಮಾಡಲಾಗುವುದು” ಎಂದು ಅವರು ಹೇಳಿದರು.
ಇಲ್ಲಿಯವರೆಗೆ, ಕರ್ನಾಟಕದಲ್ಲಿ ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ಮೈಸೂರು ಮತ್ತು ಹಂಪಿಯನ್ನು ಅಭಿವೃದ್ಧಿ ಮಾಡಲು ಆಯ್ಕೆ ಮಾಡಲಾಗಿದೆ.
ವಿಭಿನ್ನ ವಿಷಯದ ಪ್ರವಾಸಿ ಸರ್ಕ್ಯೂಟ್ಗಳನ್ನು ಸಂಯೋಜಿಸುವ ಮೂಲಕ ಒಟ್ಟಾರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವು ಈ ಯೋಜನೆಯನ್ನು 2015 ರಲ್ಲಿ ಆರಂಭಿಸಿತು.