ಮೈಸೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಬಗ್ಗೆ ನೀಡಿರುವ ಹೇಳಿಕೆ ಖಂಡಿಸಿ ಮೈಸೂರು ಹಾಗೂ ಮಂಡ್ಯದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ನೇತೃತ್ವದಲ್ಲಿ ಪ್ರತಿಭಟನೆ ನಡೆದವು.
ಇಂದು ಮಂಗಳವಾರ ಬೆಳಗ್ಗೆಯಿಂದಲೇ ವ್ಯಾಪಾರ ವಹಿವಾಟು ಎಂದಿನಂತೆ ಆರಂಭವಾಗಿದ್ದು, ಬಂದ್ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆರಂಭದಲ್ಲಿ ಬಸ್ ಸಂಚಾರ, ವಾಹನ ಸಂಚಾರ, ವ್ಯಾಪಾರ ವಹಿವಾಟುಗಳು ನಡೆದರೂ ನಂತರ ಅಡ್ಡಿಪಡಿಸಲಾಯಿತು. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ವಾಹನಗಳಿಲ್ಲದೆ ಪರದಾಡಿದರು.
ಮುಂಜಾಗ್ರತಾ ಕ್ರಮವಾಗಿ ಮೈಸೂರು ಬಸ್ ನಿಲ್ದಾಣದ ಬಳಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸಿಆರ್ ವ್ಯಾನ್, ಗಸ್ತು ವಾಹನ, ಕಮಾಂಡೋ ವಾಹನ ನಿಯೋಜನೆ ಮಾಡಲಾಗಿದೆ.ದಲಿತ ಕಾರ್ಯಕರ್ತರು ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿಯಿಂದ ತುಳಿದರು.
ಕೇಂದ್ರ ಬಸ್ ನಿಲ್ದಾಣದ ಬಳಿ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಬಸ್ ನಿಲ್ದಾಣದ ಪ್ರವೇಶ ದ್ವಾರದ ಬಳಿ ಧರಣಿ ಕುಳಿತ ಪ್ರತಿಭಟನಾನಿರತರು ಬಸ್ ಸಂಚಾರ ತಡೆದರು. ಬಸ್ಗಳ ಓಡಾಟ ನಿಲ್ಲಿಸಿ ಆಕ್ರೋಶ ಹೊರಹಾಕಿದರು. ಬಸ್ ನಿಲ್ದಾಣದ ಹೊರ ಭಾಗದಲ್ಲಿ ಅಮಿತ್ ಶಾ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದರು. ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ಹೊರಹಾಕಿದರು.
ಪ್ರತಿಕೃತಿಗೆ ಬೆಂಕಿ ಹಚ್ಚಲು ಪೊಲೀಸರು ಬಿಡದಿದ್ದಾಗ, ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೂ ಅಮಿತ್ ಶಾ ಪ್ರತಿಕೃತಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು. ಬೆಂಕಿ ಹಚ್ಚಿದ ತಕ್ಷಣ ಪೊಲೀಸರು ನೀರು ಹಾಕಿ ಬೆಂಕಿಯನ್ನು ನಂದಿಸಿದರು. ಸತ್ತೋದ ಅಮಿತ್ ಶಾ ಎಂದು ಪ್ರತಿಭಟನಾಕಾರರು ಕೂಗಿದರು.
ಪ್ರತಿಭಟನೆ ಹಿನ್ನೆಲೆ ಅರ್ ಎಸ್ ಎಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು, ರಸ್ತೆ ಮಧ್ಯದಲ್ಲೇ ತಡೆದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಕಾರರು ಆರ್ ಎಸ್ಎಸ್ ಕಚೇರಿಯತ್ತ ತೆರಳದಂತೆ ಪೊಲೀಸರಿಂದ ಬ್ಯಾರಿಕೇಡ್ ಅಳವಡಿಸಿದರು.
ಇಂದು ಬೆಳಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ಕರೆ ನೀಡಿರುವ ಮೈಸೂರು ಬಂದ್ ಬೆಂಬಲಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸದಸ್ಯರು ಗ್ರಾಮಾಂತರ ಬಸ್ ನಿಲ್ದಾಣ(ಸಬ್ ಅರ್ಬನ್) ಮುಂಭಾಗ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಖಾಸಗಿ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಬಂದ್ ನಲ್ಲಿ ವಿವಿಧ ಧಾರ್ಮಿಕ ಸಂಸ್ಥೆಗಳ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಟೌನ್ ಹಾಲ್ ಬಳಿಯ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.