ಚಿಕ್ಕಬಳ್ಳಾಪುರ: ದೇಶದ ಪ್ರತಿಮೂಲೆಯಲ್ಲಿರುವ ಕಟ್ಟಕಡೆಯವ್ಯಕ್ತಿಯನ್ನೂ ಗಮನದಲ್ಲಿಟ್ಟು ಕೊಂಡು ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿ ವಿವಿಧ ಇಲಾಖೆಗಳ ಮೂಲಕ ತಲುಪಿಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಅವರು ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಕೇಂದ್ರ ಸಂವಹನ ಇಲಾಖೆ ಮೈಸೂರು, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ ಪೋಷಣ್ ಅಭಿಯಾನ, ನೂತನ ಅಪರಾಧ ಕಾನೂನುಗಳು, ಪ್ರಧಾನ ಮಂತ್ರಿ ದೂರದೃಷ್ಟಿ 2047 ಮತ್ತು ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಮೂರು ದಿನಗಳ ವಿಶೇಷ ಛಾಯಾಚಿತ್ರ ಪ್ರದರ್ಶನ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಬಡವರು, ದೀನ ದುರ್ಬಲರು, ಕೃಷಿ ಕಾರ್ಮಿಕರು, ಯುವಜನರು, ಗಿರಿಜನರು ಮತ್ತು ಮಹಿಳೆಯರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಲವು ಮಹತ್ವದ ಯೋಜನೆಗಳನ್ನು ಜಾರಿ ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಜಲಜೀವನ್ ಮಿಷನ್, ಮಹಿಳೆಯರ ಆರೋಗ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿ ಸ್ವಚ್ಛ ಭಾರತ್ ಯೋಜನೆಯಡಿಯ ವೈಯಕ್ತಿಕ ಶೌಚಾಲಯ ನಿರ್ಮಾಣ, ಮಹಿಳೆಯರು ಮತ್ತು ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಮಾಡಲು ಮಾತೃವಂದನಾ ಮತ್ತು ಪೋಷಣ್ ಅಭಿಯಾನ ಮುಂತಾದ 70ಕ್ಕೂ ಹೆಚ್ಚು ಕಾರ್ಯಕ್ರಮ, ಯೋಜನೆಗಳನ್ನು ಕಳೆದ ಒಂದು ದಶಕದಲ್ಲಿ ಜಾರಿ ಮಾಡಲಾಗಿದೆ.
ದಶಕಗಳ ಹಿಂದೆಯೇ ದೇಶದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾಗಿದ್ದರೂ ಬಡವರು, ಜನಸಾಮಾನ್ಯರೆಲ್ಲರೂ ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಲು ಜನಧನ್ ಯೋಜನೆ ಜಾರಿಯಾಗಬೇಕಾಯಿತು. ಕಳೆದ ಒಂದು ದಶಕದಲ್ಲಿ ಜನಧನ್ ಯೋಜನೆಯಡಿ 48 ಕೋಟಿ ಜನರು ಖಾತೆ ತೆರೆದಿದ್ದು, ಇದೊಂದು ದಾಖಲೆಯಾಗಿದೆ.
ಮುಖ್ಯವಾಗಿ ಗ್ರಾಮೀಣ ಭಾಗದ ಅಸಹಾಯಕ ವರ್ಗಗಳ ಶ್ರೇಯೋಭಿವೃದ್ಧಿಯಿಂದ ಈ ಯೋಜನೆಗಳನ್ನು ಜಾರಿ ಮಾಡಿದೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತು ವ್ಯಾಪಕ ಪ್ರಚಾರ ಮಾಡಿ ಜನರಲ್ಲಿ ಜಾಗೃತಿಯನ್ನೂ ಮೂಡಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ವಿವಿಧ ಫ್ಲೆಕ್ಸ್ ಬ್ಯಾನರ್, ಪ್ರದರ್ಶನ ಫಲಕ, ಸಾಕ್ಷ್ಯಚಿತ್ರ ಪ್ರದರ್ಶಿಸಿ ಅರಿವು ಮೂಡಿಸಲಾಯಿತು.