ಪುಣೆ: ಮಹಾರಾಷ್ಟ್ರದ ಮೀನುಗಾರಿಕಾ ಸಚಿವ ನಿತೇಶ್ ರಾಣೆ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಕೇರಳ “ಮಿನಿ-ಪಾಕಿಸ್ತಾನ”. ಅದಕ್ಕೆ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರನ್ನು ಗೆಲ್ಲಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷದ(ಬಿಜೆಪಿ) ನಾಯಕ ಹೇಳಿದ್ದಾರೆ.
“ಕೇರಳ ಮಿನಿ ಪಾಕಿಸ್ತಾನವಾಗಿದೆ. ಅದಕ್ಕಾಗಿಯೇ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅಲ್ಲಿಂದ ಆಯ್ಕೆಯಾಗಿದ್ದಾರೆ. ಎಲ್ಲಾ ಭಯೋತ್ಪಾದಕರು ಅವರಿಗೆ ಮತ ಹಾಕುತ್ತಾರೆ. ಇದು ಸತ್ಯ. ಇವರೆಲ್ಲಾ ಭಯೋತ್ಪಾದಕರ ನೆರವಿನಿಂದ ಸಂಸದರಾಗಿದ್ದಾರೆ” ಎಂದು ರಾಣೆ ಹೇಳಿದ್ದಾರೆ.
ಪುಣೆ ಜಿಲ್ಲೆಯ ಪುರಂದರ ತಾಲೂಕಿನಲ್ಲಿ ಅಫ್ಜಲ್ ಖಾನ್ ಎದುರು ಛತ್ರಪತಿ ಶಿವಾಜಿಯ ಗೆಲುವಿನ ವರ್ಷಾಚರಣೆ ವೇಳೆ ರಾಣೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾಣೆ, ಕೇರಳ ಭಾರತದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಕೇರಳನ್ನು ಪಾಕಿಸ್ತಾನಕ್ಕೆ ಹೋಲಿಸಿದ ಹೇಳಿಕೆಯನ್ನು ಸಮರ್ಥಿಸಲು “ಧಾರ್ಮಿಕ ಮತಾಂತರಗಳು” ಮತ್ತು “ಲವ್ ಜಿಹಾದ್” ನಂತಹ ವಿಷಯಗಳನ್ನು ಉಲ್ಲೇಖಿಸಿದ್ದು, ತಮ್ಮ ಹೇಳಿಕೆ ವಾಸ್ತವಿಕವಾಗಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಪುತ್ರ ನಿತೇಶ್ ರಾಣೆ ಅವರು ಇತ್ತೀಚೆಗೆ ಮುಕ್ತಾಯಗೊಂಡ 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಂಕಾವ್ಲಿ ಕ್ಷೇತ್ರದಿಂದ ಗೆದ್ದಿದ್ದಾರೆ. ನೂತನ ಸಚಿವ ಸಂಪುಟದಲ್ಲಿ ರಾಣೆ ಅವರಿಗೆ ಮೀನುಗಾರಿಕೆ ಮತ್ತು ಬಂದರು ಖಾತೆ ನೀಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅತುಲ್ ಲೋಂಧೆ ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಣೆ ಸಂಪುಟದ ಭಾಗವಾಗಿ ಉಳಿಯುವ ಅಗತ್ಯವೇನೆಂದು ಪ್ರಶ್ನಿಸಿದ್ದಾರೆ.
“ನಿತೇಶ್ ರಾಣೆ ಅವರಿಂದ ಇನ್ನೇನು ನಿರೀಕ್ಷಿಸಬಹುದು? ಅವರು ಇದನ್ನು ಮಾಡಲು ಮಾತ್ರ ಸಚಿವರಾಗಿದ್ದಾರೆ. ಆದರೆ, ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ದೇವೇಂದ್ರ ಫಡ್ನವಿಸ್ ಅವರನ್ನು ಕೇಳಲು ಬಯಸುತ್ತೇನೆ. ಸಚಿವರಾಗಿರುವ ವ್ಯಕ್ತಿ(ರಾಣೆ) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಭಾರತದ ಸಾರ್ವಭೌಮತ್ವ ಮತ್ತು ಐಕ್ಯತೆಯನ್ನು ಕಾಪಾಡಬೇಕಾದ ಸಚಿವರು ದೇಶದ ಒಂದು ರಾಜ್ಯವನ್ನು ಪಾಕಿಸ್ತಾನಕ್ಕೆ ಹೋಲಿಸಿ, ಅಲ್ಲಿನ ಮತದಾರರನ್ನು ‘ಭಯೋತ್ಪಾದಕರು’ ಎಂದು ಕರೆದಿದ್ದಾರೆ. ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಹಕ್ಕಿದೆಯೇ?