ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 15 ರ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬದಲಾವಣೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಸಿದ್ಧರಾಮಯ್ಯರ ಖುರ್ಚಿ ಖಾಲಿ ಮಾಡಿಸಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿದ್ದಾರೆ ಎಂಬ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ರ ಹೇಳಿಕೆಯಿಂದಾಗಿ, ರಾಜ್ಯ ಕಾಂಗ್ರೆಸ್ನಲ್ಲಿ ಭಾರೀ ಬೆಳವಣಿಗೆಗಳು ಆರಂಭಗೊಂಡಿದೆ.
ದಲಿತ ಸಚಿವರುಗಳು, ಶಾಸಕರುಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು, ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಲು ಈ ವಾರ ದೆಹಲಿಗೆ ತೆರಳುತ್ತಿದ್ದಾರೆ. ಇನ್ನು ಡಿಸಿಎಂ ಡಿಕೆಶಿ, ರಾಜಕಾರಣದ ಬಗ್ಗೆ ಮೌನಕ್ಕೆ ಶರಣಾಗಿದ್ದು, ಸದ್ಯ ಯಾವುದೇ ಬೆಳವಣಿಗೆಗಳು ಇಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ, ಹೈಕಮಾಂಡ್ ನಾಯಕರನ್ನು ನೋಡಲು ಹೋಗುವುದನ್ನೇ ಏಕೆ ಮಾತನ್ನಾಡುತ್ತೀರಿ? ಮೊದಲು ನಿಮ್ಮ ಪಕ್ಷದ ಆಂತರಿಕ ಕಚ್ಚಾಟ ಸರಿ ಮಾಡಿಕೊಳ್ಳಿ ಎಂದು ಕುಟುಕಿದ್ದಾರೆ.
ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ನಮ್ಮದು ಹೈಕಮಾಂಡ್ ನಾಯಕರ ನೇತೃತ್ವದಲ್ಲಿರುವ ಪಕ್ಷ. ಅಂತಹ ಬದಲಾವಣೆಗಳು ಸದ್ಯಕ್ಕೇನು ಇಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ ಎಂದಿದ್ದಾರೆ. ಆದೇನೇ ಇರಲಿ, ಆರ್.ಅಶೋಕ್ರ ಒಂದು ಹೇಳಿಕೆ, ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ತಳಮಳ ಸೃಷ್ಠಿಸಿರುವುದಂತೂ ಸುಳ್ಳಲ್ಲ.