ಬೆಂಗಳೂರು: ಕಾಂಗ್ರೆಸ್ ಪಕ್ಷ ಸಮಯಕ್ಕೊಂದು ನಿಲುವು ತಳೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಪಕ್ಷದ ಜೆಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ರಾಜ್ಯಪಾಲರ ಹೊಣೆಗಾರಿಕೆ ಬಗ್ಗೆ ನೀಡಿದ್ದ ಹೇಳಿಕೆಯ ವಿಡೀಯೊ ತುಣಕನ್ನು ಪ್ರದರ್ಶಿಸಿ ರಾಜ್ಯಪಾಲರ ಬಗ್ಗೆ ಕಾಂಗ್ರೆಸ್ ಪಕ್ಷ ಹೇಗೆ ಸಮಯಕ್ಕೊಂದು ನಿಲುವು ತೆಗೆದುಕೊಳ್ಳುತ್ತಿದೆ ನೋಡಿ ಎಂದು ಮಾಧ್ಯಮದವರಿಗೆ ವಿವರಿಸಿದರು.
ತಮ್ಮ ವಿರುದ್ಧ ಕೇಳಿ ಬಂದಿರುವ ಗಂಗೇನಹಳ್ಳಿ ಡಿನೋಟಿಫಿಕೇಶನ್ ಆರೋಪಕ್ಕೆ ಸಂಬಂಧಪಟ್ಟಂತೆ ನನಗೆ ನೋಟಿಸ್ ನೀಡದೆ ಹೋದರು ನಾನೇ ಖುದ್ದಾಗಿ ಲೋಕಾಯುಕ್ತ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದೇನೆ.ಇವರು ಸಮಯಕ್ಕೊಂದು ಸುಳ್ಳು ಹೇಲುತ್ತಾರೆ. ತಮ್ಮ ವಿರುದ್ಧ ಇದುವರೆಗೂ ಒಂದು ಎಫ್ಐಆರ್ ಆಗಿಲ್ಲ ಎಂದು ಹೇಳುವ ಮುಖ್ಯಮಂತ್ರಿಯವರ ಮೇಲೆ 50 ಪ್ರಕರಣ ಬಾಕಿಯಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಿಮಗೆ ಎಲ್ಲಾ ಅಧಿಕಾರ ಇದೆ. ನೀವೆ ಚರ್ಚೆ ಮಾಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿರುವ ಅವರು ಚುನಾವಣಾ ಬಾಂಡ್ಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಬಾಂಡ್ಗೂ ಮುಡಾ ಹಗರಣಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಅವರು, ಚುನಾವಣಾ ಬಾಂಡ್ ಹಣ ನಿರ್ಮಲಾ ಅವರ ಕುಟುಂಬಕ್ಕೆ ಹೋಗಿಲ್ಲ. ಯಾವುದ್ಯಾವುದಕ್ಕೋ ತಳುಕು ಹಾಕುವುದನ್ನು ಬಿಡಿ ಎಂದು ಹೇಳಿದರು.ತಮ್ಮ ಸುದ್ದಿಗೋಷ್ಠಿಯುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.