ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ಆಶ್ಚರ್ಯಕರ ರೀತಿಯಲ್ಲಿ ನಡೆದಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಲಾಗುತ್ತಿದ್ದ, ಮಾಜಿವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ರಾತ್ರಿ ಮತ್ತು ಇಂದು ಬೆಳಿಗ್ಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ದಿಢೀರ್ ಎಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಇಂದು ಬೆಳಿಗ್ಗೆ 11.30ರ ಸುಮಾರಿಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ಗಣ್ಯರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.ಪಕ್ಷದ ಅಧ್ಯಕ್ಷರಾಗಿರುವ ಶಿವಕುಮಾರ್ ಅವರು ಪಕ್ಷದ ಚಿಹ್ನೆಯುಳ್ಳ ಶಾಲು ಮತ್ತು ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷ ಸೇರ್ಪಡೆಗೂ ಮುನ್ನ ಯೋಗೇಶ್ವರ್ ಅವರು, ತಾವು ಇದುವರೆಗೂ ಭಾರತೀಯ ಜನತಾಪಾರ್ಟಿಗೆ ಅಧಿಕೃತವಾಗಿ ರಾಜೀನಾಮೆ ಪತ್ರ ರವಾನಿಸಿದರು.
ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ವಾಟ್ಸ್ಅಪ್ ಮೂಲಕ ರಾಜೀನಾಮೆ ಪತ್ರ ರವಾನೆ ಮಾಡಿ ಇದುವರೆಗು ನೀಡಿದ್ದ ಸಹಕಾರಕ್ಕೆ ಧನ್ಯವಾದ ತಿಳಿಸಿದರು.ದೆಹಲಿಯಲ್ಲೇ ಇರುವ ಬಿ.ವೈ.ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ತಲುಪಿದ್ದು, ಇದುವರೆಗೂ ನಡೆದಿರುವ ಬೆಳವಣಿಗೆಗಳ ಬಗ್ಗೆ ವಿಯೇಂದ್ರ ಅವರು ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.