ಬೆಳಗಾವಿ: ಮಂಗಳೂರು ಮತ್ತು ಮುಂಬೈ ನಡುವಿನ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ರಾಜ್ಯ ಸರ್ಕಾರ ಉತ್ಸುಕವಾಗಿದೆ ಮತ್ತು ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕೊಂಕಣ ರೈಲ್ವೆಯೊಂದಿಗೆ ಪತ್ರ ವ್ಯವಹಾರ ಆರಂಭಿಸಿದೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಶುಕ್ರವಾರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶಾಸಕರಾದ ಕಿರಣಕುಮಾರ ಕೊಡ್ಗಿ ಮತ್ತು ವಿ ಸುನೀಲ್ ಕುಮಾರ್ ಅವರು ಪ್ರಸ್ತಾಪಿಸಿದ ಪ್ರಶ್ನೆಗೆ ಕೆಜೆ ಜಾರ್ಜ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದರು.
ಈಗಾಗಲೇ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸಬೇಕಾಗಿತ್ತು ಎಂದ ಜಾರ್ಜ್, ಕೊಂಕಣ ರೈಲ್ವೆಯು ಅನುಭವಿಸುತ್ತಿರುವ ನಷ್ಟದಿಂದಾಗಿ ಕೊಂಕಣ ಮಾರ್ಗದ ಯಾವುದೇ ರೈಲು ನಿಲ್ದಾಣಗಳು ಅಭಿವೃದ್ಧಿಗೊಂಡಿಲ್ಲ ಎಂದರು.
ಕರ್ನಾಟಕದ ಪಾಲಿನ 270 ಕೋಟಿ ರೂ.ಹಣವನ್ನು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಕೇಂದ್ರದೊಂದಿಗೆ ಮಾತುಕತೆ ನಡೆಸಲಾಗಿದೆ. ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವುದರಿಂದ ರೈಲು ನಿಲ್ದಾಣಗಳು ಮತ್ತು ಇತರ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಜಾರ್ಜ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು, ರಾಜ್ಯ ಸರ್ಕಾರವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ಕೊಂಕಣ ರೈಲ್ವೆ ಅಧಿಕಾರಿಗಳಿಗೆ ವಿಲೀನಕ್ಕಾಗಿ ಪತ್ರ ಬರೆದಿದೆ ಎಂದು ಪುನರುಚ್ಚರಿಸಿದರು.