ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಜನಾಂಗೀಯ ಸಂಘರ್ಷ ತಾರಕಕ್ಕೇರಿದೆ. ದೇವಸ್ಥಾನವೊಂದರ ಉತ್ಸವ ಸಂದರ್ಭ ಸ್ಥಳೀಯ ಧಾರ್ಮಿಕ ಉಡುಪು ಧರಿಸುವ ಸಂಬಂಧ ವಿವಾದ ಬುಗಿಲೆದ್ದಿದ್ದು, ದೇವಸ್ಥಾನ ಇರುವ ಊರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಸರ್ಪಗಾವಲು ನಿಯೋಜನೆ ಮಾಡಲಾಗಿದೆ.
ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಪಾಳು ಬಿದ್ದಿದ್ದ ಪುರಾತನ ಮೃತ್ಯುಂಜಯ ದೇವಸ್ಥಾನವನ್ನು ಕೋಟ್ಯಂತರ ರೂ ಖರ್ಚು ಮಾಡಿ ಕಳೆದ ಒಂಭತ್ತು ವರ್ಷಗಳಿಂದ ಜೀರ್ಣೋದ್ಧಾರ ಮಾಡಲಾಗಿದೆ. ಕಳೆದ ವರ್ಷದಿಂದ ವಾರ್ಷಿಕ ಉತ್ಸವವನ್ನೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭ ಊರಿನಲ್ಲಿ ಕೊಡವ, ಗೌಡ ಜನಾಂಗ ಸೇರಿದಂತೆ ಹತ್ತು ಹಲವು ಜನಾಂಗಳಿರುವುದರಿಂದ ಯಾವುದೇ ಒಂದು ಜನಾಂಗದ ಧಾರ್ಮಿಕ ಉಡುಪು ತೊಟ್ಟು ಬರುವುದನ್ನು ನಿಷೇಧಿಸಿ ಬೈಲಾ ರಚನೆ ಮಾಡಲಾಗಿತ್ತು.
ಅದೇ ಪ್ರಕಾರವಾಗಿ ಕಳೆದ ವರ್ಷ ಉತ್ಸವ ನೆರವೇರಿತ್ತು. ಈ ವರ್ಷವೂ ಇದೇ ಡಿಸೆಂಬರ್ 23 ರಿಂದ ಬೇರೆ ಬಗೆಯ ಉತ್ಸವಗಳು ನಡೆದಿವೆ. ಉತ್ಸವದ ಕೊನೆಯ ದಿನ ಅಂದರೆ, ಡಿ. 27 ರಂದು ಸಂಜೆ ದೇವರು ಸ್ನಾನಕ್ಕೆ ಹೊರಡುವ ಸಂದರ್ಭದಲ್ಲಿ ಒಂದು ಜನಾಂಗಕ್ಕೆ ಸೇರಿದ ಹಲವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದಾರೆ. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಎರಡೂ ಗುಂಪುಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ.
ದೇವರ ಮೂರ್ತಿ ಹೊತ್ತು ಜಳಕಕ್ಕೆ ಹೊರಟಿದ್ದ ಅರ್ಚಕ ವೃಂದ ಈ ಘಟನೆಯಿಂದ ಬೇಸರಗೊಂಡು ಉತ್ಸವ ಮೂರ್ತಿಯನ್ನ ಕೆಳಗಿಳಿಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬ ಮಾರಕಾಸ್ತ್ರ ತೋರಿಸಿದ್ದು, ಮತ್ತಷ್ಟು ಕೆರಳುವಂತೆ ಮಾಡಿದೆ. ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಮಧ್ಯರಾತ್ರಿ 12 ಕಳೆದರೂ ಎರಡೂ ಕಡೆಯವರು ಪಟ್ಟು ಬಿಡಲಿಲ್ಲ. ಹಾಗಾಗಿ ವಿವಾದ ಇತ್ಯರ್ಥವಾಗಿಲ್ಲ.
ಧಾರ್ಮಿಕ ಉಡುಪನ್ನು ಧರಿಸಿ ತೆರಳಲು ಅವಕಾಶ ನೀಡಲಿಲ್ಲ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ತಮ್ಮ ಜನಾಂಗದ ಉಡುಪಿಗೆ ವಿರೋಧ ವ್ಯಕ್ತಪಡಿಸಿದರು ಎಂದು ಆ ಜನಾಂಗದ ಕೆಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಕ್ಕೆ ಆ ಜನಾಂಗದ ಸಾವಿರಾರು ಮಂದಿ ಸಾಂಪ್ರದಾಯಿಕ ಉಡುಪಿನಲ್ಲಿ ಬೈಕ್ ಜಾಥಾ ತೆರಳಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತದೆ. ಇದೇ ವೇಳೆ, ಇದರ ವಿರುದ್ಧ ಮತ್ತೊಂದು ಜನಾಂಗದ ಜನರೂ ಕೂಡ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ತೆರಳಲು ಕರೆ ನೀಡುತ್ತಾರೆ.
ಜನಾಂಗಗಳ ಮಧ್ಯೆ ಘರ್ಷಣೆ ಸಂಭವಿಸುವುದನ್ನ ಅರಿತ ಜಿಲ್ಲಾಡಳಿತ ತಕ್ಷಣವೇ ಕಟ್ಟೆಮಾಡು ದೇವಸ್ಥಾನ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ 400ಕ್ಕೂ ಅಧಿಕ ಪೊಲಿಸರನ್ನ ನಿಯೋಜನೆ ಮಾಡಿದೆ. ಕಟ್ಟೆಮಾಡು ಗ್ರಾಮ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲೂ ನಾಕಬಂಧಿ ಹಾಕಲಾಗಿದೆ. ಯಾವುದೇ ಜಾಥಾ, ರ್ಯಾಲಿ, ಮೆರವಣಿಗೆ ಗ್ರಾಮ ಪ್ರವೇಶಿಸದಂತೆ ಎಚ್ಚರಿಕೆವಹಿಸಲಾಗಿದೆ.
ಸುಮಾರು 1.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಆಕರ್ಷಕ ಮೃತ್ಯುಂಜಯ ದೇವಸ್ಥಾನದಲ್ಲಿ ಈ ದಿನ ಹತ್ತು ಹಲವು ಬಗೆಯ ಪೂಜಾ ಕೈಂಕರ್ಯಗಳು ನಡೆಯಬೇಕಿದ್ದವು. ಸಾವಿರಾರು ಭಕ್ತರು ಪಾಲ್ಗೊಳ್ಳಬೇಕಿತ್ತು. ಆದರೆ ನಿಷೇಧಾಜ್ಞೆಯಿಂದಾಗಿ ಎಲ್ಲವು ರದ್ದುಗೊಂಡಿದೆ. ಇಂದು ಕೇವಲ ನಿತ್ಯ ಪೂಜೆ ನಡೆದಿದೆ. ಭಕ್ತರಿಲ್ಲದೆ ಹತ್ತಾರು ಪೊಲೀಸರ ಸಮ್ಮುಖದಲ್ಲಿ ಗರ್ಭಗುಡಿಯಲ್ಲಿ ಪೂಜೆ ನರೆವೇರಿದೆ.
ಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕಟ್ಟಮನೆ ಶಶಿ ಹೇಳುವ ಪ್ರಕಾರ, ಈ ಗ್ರಾಮದಲ್ಲಿ ಹತ್ತು ಹಲವು ಜನಾಂಗಗಳಿವೆ. ಅವರಿಗೆ ಅವರದ್ದೇ ಆದ ಸಾಂಸ್ಕೃತಿಕ ಆಚಾರ ವಿಚಾರಗಳಿವೆ. ಇವರೆಲ್ಲರೂ ಸೇರಿಯೇ ಏಳು ವರ್ಷ ಕಷ್ಟಪಟ್ಟು ದೇವಸ್ಥಾನ ಕಟ್ಟಿದ್ದಾರೆ. ಹೀಗಿರುವಾಗ ಯಾವುದೇ ಒಂದು ಜನಾಂಗದ ಧಾರ್ಮಿಕ ಉಡುಪು ಧರಿಸಲು ಅವಕಾಶ ನೀಡಿದರೆ ಅದು ಅಸಮಾನತೆಯಾಗುತ್ತೆ. ಎಲ್ಲರೂ ಬಿಳಿ ಪಂಚೆ ಮತ್ತು ಶರ್ಟ್ನಲ್ಲೇ ಉತ್ಸವಕ್ಕೆ ಬರುವಂತೆ ಬೈಲಾದಲ್ಲಿ ನಿಯಮ ಮಾಡಲಾಗಿದೆ. ಇದಕ್ಕೆ ಇಡೀ ಊರಿನವರು, ಆಡಳಿತ ಮಂಡಳಿ ಸದಸ್ಯರು ಎಲ್ಲರೂ ಒಪ್ಪಿದ್ದಾರೆ. ಕಳೆದ ವರ್ಷ ಯಾವುದೇ ವಿವಾದವಿಲ್ಲದೆ ಉತ್ಸವ ಜರುಗಿದೆ. ಆದರೆ ಈ ವರ್ಷ ಒಂದು ಜನಾಂಗದ ಕೆಲವರು ಉದ್ದೇಶಪೂರ್ವಕವಾಗಿಯೇ ಜನಾಂಗೀಯ ದ್ವೇಷ ಮೂಡಿಸಲು ಧಾರ್ಮಿಕ ಉಡುಪಿನಲ್ಲಿ ಬಂದು ಕಿಚ್ಚು ಹಚ್ಚಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಯಾವುದೇ ಜನಾಂಗದ ವಿರುದ್ಧ ಇಲ್ಲ ಎಂದಿದ್ದಾರೆ.
ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮುಂಡುವಂಡ ಮುತ್ತಪ್ಪ ಮಾತನಾಡಿ, ಕಟ್ಟೆಮಾಡು ದೇವಸ್ಥಾನದಲ್ಲಿ ನಡೆದಿರುವ ಘಟನೆ ವಿಷಾದಕರವಾದುದು. ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಾದ ವಿಷಯವನ್ನು ಸಂಘರ್ಷಕ್ಕೆ ಕೊಂಡೊಯ್ಯಲಾಗಿದೆ. ಹಲವು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿರುವ ಧಾರ್ಮಿಕ ಉಡುಪನ್ನು ದೇವಸ್ಥಾನಕ್ಕೆ ಹಾಕಲು ಅಡ್ಡಿ ಮಾಡಿರುವುದು ಸರಿಯಲ್ಲ. ಜಿಲ್ಲಾಡಳಿತ ಎಲ್ಲರನ್ನೂ ಕರೆದು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದ್ದಾರೆ.
ಸದ್ಯ ಜಿಲ್ಲಾಡಳಿತ ಕರೆದಿರುವ ಶಾಂತಿಸಭೆಯಲ್ಲಿ ಎರಡೂ ಜನಾಂಗದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆ ಎಂಬುದು ಕುತೂಹಲ ಕೆರೆಳಿಸಿದೆ. ಆದರೆ ಶಾಂತಿಯುತ ಊರಿನಲ್ಲಿ ಒಂದು ಸಣ್ಣ ವಿವಾದ ಇಡೀ ಜಿಲ್ಲೆಯಲ್ಲಿ ಎರಡು ಜನಾಂಗದ ಮಧ್ಯೆ ದ್ವೇಶದ ಕಿಚ್ಚು ಹತ್ತಿಸಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ.



