ಮಡಿಕೇರಿ: ಮಡಿಕೇರಿ ತಾಲೂಕಿನ ಗಾಳಿಬೀಡು ಪಂಚಾಯಿತಿಗೆ ಪ್ರತಿಷ್ಠಿತ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸ್ಟೇಟ್ ವಿಕಾಸ್ ಪುರಸ್ಕಾರ್ ಪ್ರಶಸ್ತಿ ಲಭಿಸಿದ್ದು, ಈ ಮೂಲಕ ದೇಶದ ಪ್ರಮುಖ ಮೂರು ಪಂಚಾಯಿತಿಗಳಲ್ಲಿ ಒಂದಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೆಹಲಿಯಲ್ಲಿ ಗಾಳಿಬೀಡು ಪಂಚಾಯಿತಿ ಅಧ್ಯಕ್ಷೆ ಉಷಾ ಬಿಜಿ ಮತ್ತು ಪಿಡಿಒ ಕೆಎ ಶಶಿ ಕಿರಣ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಪಂಚಾಯತ್ ಪುರಸ್ಕಾರ 2024 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
”ಹಲವು ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಹಿನ್ನೆಲೆಯಲ್ಲಿ ಗಾಳಿಬೀಡು ಪಂಚಾಯತ್ಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಪಂಚಾಯಿತಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಗಾಳಿಬೀಡು ಪಂಚಾಯಿತಿ ಪಿಡಿಒ ಶಶಿ ಕಿರಣ ಅವರು ಹೇಳಿದ್ದಾರೆ.
ತನ್ನ ವ್ಯಾಪ್ತಿಯಲ್ಲಿ ಒಟ್ಟು ಹತ್ತು ಗ್ರಾಮಗಳನ್ನು ಹೊಂದಿರುವ ಗಾಳಿಬೀಡು ಪಂಚಾಯತ್, ಸರ್ಕಾರದ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ.
ಬಡತನ ನಿರ್ಮೂಲನೆ ಮತ್ತು ಸುಧಾರಿತ ಜೀವನೋಪಾಯ ಪಂಚಾಯಿತಿ ವಿಭಾಗದಲ್ಲಿ ಗಾಳಿಬೀಡು ಪಂಚಾಯಿತಿಗೆ ಈ ಪ್ರಶಸ್ತಿ ಬಂದಿದ್ದು, ಇದು 1 ಕೋಟಿ ರೂಪಾಯಿ ನಗದು ಬಹುಮಾನ ಒಳಗೊಂಡಿದೆ.
ಸರ್ಕಾರಿ ಶಾಲೆಗಳಲ್ಲಿ ಉದ್ಯಾನವನ ಸ್ಥಾಪನೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಶೌಚಾಲಯ ವ್ಯವಸ್ಥೆ, ಬಡತನ ನಿರ್ಮೂಲನೆ, ನೀರಾವರಿ ಕೆರೆಗಳ ಸ್ಥಾಪನೆ, ಪೌಷ್ಠಿಕ ಆಹಾರ ಪೂರೈಕೆಯೊಂದಿಗೆ ಅಂಗನವಾಡಿ ಅಭಿವೃದ್ಧಿ, ಪಿಂಚಣಿ ಯೋಜನೆಗಳ ಅನುಷ್ಠಾನ ಸೇರಿದಂತೆ ಪಂಚಾಯಿತಿಯು ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ.