ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ ದೂರಿನ ತನಿಖೆಯನ್ನು ನಡೆಸಿದ್ದ ಲೋಕಾಯುಕ್ತ ಇಂದು ತನಿಖಾ ವರದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಜಾನನ ಭಟ್ ಅವರಿದ್ದ ಪೀಠಕ್ಕೆ ಸಲ್ಲಿಕೆ ಮಾಡಲಾಗಿದೆ.
ಲೋಕಾಯುಕ್ತ ಎಸ್ಪಿ ಉದೇಶ್ ಅವರು ಸುಮಾರು 11 ಸಾವಿರ ಪುಟಗಳ ತನಿಖಾ ವರದಿಯನ್ನು ಇಂದು ಸಲ್ಲಿಕೆಯಾಗಿದೆ.ಅಂತಿಮ ವರದಿಯನ್ನು ಪಡೆದ ನ್ಯಾಯಾಲಯ ವಿಚಾರಣೆಯನ್ನು ಫೆ. 24ಕ್ಕೆ ಮುಂದೂಡಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಸಾಕ್ಯಾಧಾರಗಳಿಲ್ಲವೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ದೂರು ದಾಖಲು ಮಾಡಿದ್ದ ಸ್ನೇಹಮಯಿ ಕೃಷ್ಣ ಎಂಬುವರಿಗೆ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಅವರು ನೋಟಿಸ್ನಲ್ಲಿ ತಿಳಿಸಿದ್ದಾರೆ.
ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ನೀಡಿರುವ ಸಮನ್ಸ್ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಹ ಇಂದೇ ನಡೆಯಲಿದೆ. ಸಮನ್ಸ್ ಪ್ರಶ್ನಿಸಿ ಇಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಇಂದಿನವರೆಗೂ ಹೈಕೋರ್ಟ್ ತಡೆ ನೀಡಿತ್ತು.