ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಬೇಸತ್ತ ತಾಯಿಯೊಬ್ಬಳು ಮಕ್ಕಳ ಸಮೇತ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು. ಘಟನೆಯಲ್ಲಿ ನಾಲ್ಕು ಮಕ್ಕಳು ಸಾವನ್ನಪ್ಪಿವೆ. ಇನ್ನು ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತ ಮಕ್ಕಳನ್ನು ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ 5 ವರ್ಷದ ತನು ನಿಂಗರಾಜ ಭಜಂತಿ, ಮೂವರು ವರ್ಷದ ರಕ್ಷಾ ನಿಂಗರಾಜ ಭಜಂತ್ರಿ ಹಾಗೂ 13 ತಿಂಗಳ ಮಕ್ಕಳಾದ ಹಸೇನ ನಿಂಗರಾಜ ಭಜಂತ್ರಿ ಹಾಗೂ ಹುಸೇನ ನಿಂಗರಾಜ ಭಜಂತ್ರಿ ಎಂದು ಗುರುತಿಸಲಾಗಿದೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿಯ, ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಘಟನೆ ನಡೆದಿದೆ. ಮಕ್ಕಳನ್ನು ಕಾಲುವೆಗೆ ಎಸೆದಿದ್ದನ್ನು ನೋಡಿದ ಸ್ಥಳೀಯರು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಕ್ಕಳು ನೀರುಪಾಲಾಗಿದ್ದವು. ಆದರೆ ತಾಯಿ ಭಾಗ್ಯ ಭಜಂತ್ರಿಯನ್ನು ರಕ್ಷಿಸಿದ್ದಾರೆ.
ಕೌಟುಂಬಿಕ ಕಲಹಕ್ಕೆ ಬೇಸತ್ತ ಭಾಗ್ಯ ಈ ಕೃತ್ಯ ಎಸಗಿದ್ದಾಳೆ ಎಂದು ಶಂಕಿಸಲಾಗಿದೆ. ಸದ್ಯ ಸ್ಥಳೀಯ ಮೀನುಗಾರರು ಇಬ್ಬರು ಹೆಣ್ಣು ಮಕ್ಕಳ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ನಿಡಗುಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಗಂಡು ಮಕ್ಕಳ ಮೃತದೇಹಕ್ಕಾಗಿ ಹುಡುಕಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.