ನವದೆಹಲಿ: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.0ರಷ್ಟು ದಾಖಲಾಗಿದೆ.
ಅಮೆರಿಕ ಭೂಕಂಪನ ಮಾಪನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, 7.0 ತೀವ್ರತೆಯ ಭೂಕಂಪನದ ಕೇಂದ್ರ ಬಿಂದುವು ಕ್ಯಾಲಿಪೋರ್ನಿಯಾದ ಫರ್ಂಡೇಲ್ನ ಪಶ್ಚಿಮ-ನೈಋತ್ಯಕ್ಕೆ ಸುಮಾರು 100 ಕಿಲೋಮೀಟರ್ (ಆರು ಮೈಲುಗಳು) ಆಳದಲ್ಲಿ ದಾಖಲಾಗಿದೆ.
ಭೂಕಂಪದ ಬೆನ್ನಲ್ಲೇ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಸುನಾಮಿಯ ಯಾವುದೇ ಮುನ್ಸೂಚನೆ ದೊರೆಯದ ಹಿನ್ನಲೆಯಲ್ಲಿ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ.
ಭೂಕಂಪದ ಬೆನ್ನಲ್ಲೇ ಪ್ರಬಲ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆಯು ಎಚ್ಚರಿಕೆ ನೀಡಿತು. ಬಳಿಕ ಸುನಾಮಿ ಎಚ್ಚರಿಕೆ ಹಿಂಪಡೆಯಲಾಗಿದೆ. ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೂಕಂಪದ ಕುರಿತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಸಹ ಮಾಹಿತಿ ಹಂಚಿಕೊಂಡಿದೆ.
ಯಾವುದೇ ಪ್ರದೇಶಗಳು ಇನ್ನೂ ಯಾವುದೇ ಅಲೆಗಳನ್ನು ಅನುಭವಿಸಿರಲಿಲ್ಲ. ಹೀಗಾಗಿ ಸುನಾಮಿ ಎಚ್ಚರಿಕೆ ವಾಪಸ್ ಪಡೆಯಲಾಯಿತು ಎಂದು ಹೊನೊಲುಲುವಿನಲ್ಲಿರುವ ರಾಷ್ಟ್ರೀಯ ಹವಾಮಾನ ಸೇವೆಯ ಸುನಾಮಿ ಎಚ್ಚರಿಕೆ ಕೇಂದ್ರವು ಹೇಳಿದೆ.
ಗುರುವಾರ ಬೆಳಿಗ್ಗೆ ಕಂಪನ ಅನುಭವ ಆಗಿದ್ದು, ತಕ್ಷಣಕ್ಕೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಈ ಪ್ರದೇಶದ ಜನರಲ್ಲಿ ಭೂಮಿ ನಡುಗಿದ ಅನುಭವ ಉಂಟಾಗಿದೆ. ಇನ್ನು ಕರಾವಳಿ ನಗರವಾದ ಫೆರ್ನ್ಡೇಲ್ನಿಂದ ಪಶ್ಚಿಮಕ್ಕೆ 68 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.