ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ ವಾಣಿಜ್ಯ ಕಟ್ಟಡವೊಂದಕ್ಕೆ ಲಘು ವಿಮಾನ ಡಿಕ್ಕಿಯಾಗಿದೆ. ದುರಂತದಲ್ಲಿ ಇಬ್ಬರು ಮೃತಪಟ್ಟು, 18 ಮಂದಿ ಗಾಯಗೊಂಡಿದ್ದಾರೆ.
ಲಾಸ್ ಏಂಜಲೀಸ್ನಿಂದ ಆಗ್ನೇಯಕ್ಕೆ ಸುಮಾರು 40 ಕಿ.ಮೀ ದೂರದಲ್ಲಿರುವ ಪುಲ್ಲೆರ್ಟನ್ ಮುನಿಸಿಪಲ್ ವಿಮಾನ ನಿಲ್ದಾಣದ ಸಮೀಪ ಗುರುವಾರ ಮಧ್ಯಾಹ್ನ 2ರ ಸುಮಾರಿಗೆ ವಿಮಾನವು ಕಟ್ಟಡಕ್ಕೆ ಡಿಕ್ಕಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೀಠೋಪಕರಣ ತಯಾರಿಕಾ ಕಂಪನಿಯ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ.
ಅಪಘಾತದ ಸಮಯದಲ್ಲಿ ಸುಮಾರು 200 ಜನರು ಪೀಠೋಪಕರಣ ತಯಾರಿಕಾ ಘಟಕದೊಳಗೆ ಕೆಲಸ ಮಾಡುತ್ತಿದ್ದರು ಎಂದು ಅಪಘಾತದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಹಂಚಿಕೊಂಡಿದ್ದಾರೆ. ಸಣ್ಣ ವಿಮಾನವು ಈ ಬೃಹತ್ ಕಟ್ಟಡದ ಮೇಲ್ಛಾವಣಿಗೆ ಡಿಕ್ಕಿ ಹೊಡೆದು ಕನಿಷ್ಠ 18 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹತ್ತು ಮಂದಿಯನ್ನು ಅಗತ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಎಂಟು ಮಂದಿ ಅಪಘಾತ ಸ್ಥಳದಲ್ಲಿ ಚಿಕಿತ್ಸೆ ಪಡೆದು ಶೀಘ್ರದಲ್ಲೇ ಬಿಡುಗಡೆಗೊಂಡಿದ್ದಾರೆ.
ವಿಮಾನದಲ್ಲಿ ಎಷ್ಟು ಮಂದಿ ಇದ್ದರು, ಮೃತಪಟ್ಟಿರುವವರು ವಿಮಾನದಲ್ಲಿದ್ದವರೇ ಅಥವಾ ಘಟನಾ ಸ್ಥಳದಲ್ಲಿ ಇದ್ದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಪಘಾತಕ್ಕೀಡಾದ ವಿಮಾನ ‘Van’s RV-10’ ಎಂದು ತಿಳಿಸಿರುವ ಫೆಡರಲ್ ವಿಮಾನಯಾನ ಅಧಿಕಾರಿಗಳು, ಘಟನೆ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯೊಂದಿಗೆ ತನಿಖೆ ನಡೆಸುವುದಾಗಿ ಹೇಳಿದೆ.